ಗೌರಿ-ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಹನಗೋಡು ಗ್ರಾ.ಪಂ. ಕಚೇರಿಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಮುನಿಯಪ್ಪ ಮಾತನಾಡಿದರು. ಸಂಗೀತಾ ಸುರೇಶ್, ಅನಿತಾ, ರಾಧಾ, ಚೆನ್ನಯ್ಯ, ದಾ.ರಾ.ಮಹೇಶ್, ಸದಸ್ಯ ಶಿವಣ್ಣ ಇದ್ದರು. 
ಜಿಲ್ಲೆ

ಕಾನೂನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ

ಲೋಕೇಶ್ ಮನು. ಡಿ

ಹನಗೋಡು: ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯ ನಿಯಮಗಳನ್ನು ಪಾಲಿಸಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಬೇಕು. ಕಾನೂನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹುಣಸೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಎನ್. ಮುನಿಯಪ್ಪ ಎಚ್ಚರಿಸಿದರು.

ಗೌರಿ-ಗಣೇಶ ಹಬ್ಬ ಹಾಗೂ ಈದ್‌ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹನಗೋಡು ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಈ ಸಲ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಡಿಜೆ ಬಳಕೆ ನಿಷೇಧಿಸಲಾಗಿದೆ. ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆ ಸ್ಥಳೀಯ ಗ್ರಾ.ಪಂ.ಗಳಿಂದ ಸ್ಥಳದ ಅನುಮತಿ ಪಡೆಯಬೇಕು. ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಅವಘಡ ಮುನ್ನೆಚ್ಚರಿಕೆಯ ಕುರಿತು ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಗೌರಿ-ಗಣೇಶ ಪ್ರತಿಷ್ಠಾಪನೆಯ ಬಗ್ಗೆ ಆಯಾ ಗ್ರಾಮಗಳ ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಧ್ವನಿವರ್ಧಕಗಳ ಶಬ್ದ ಕಡಿಮೆಯಾಗಿ ಬಳಸಬೇಕು. ಯಾವುದೇ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಆಯೋಜಕರು ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜತಗೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಸಬೇಕು ಎಂದು ತಿಳಿಸಿದರು.

ಗೌರಿ-ಗಣೇಶ ಮೂರ್ತಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಲ್ಲರೂ ಒಗ್ಗಟಾಗಿ ಸೇರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೆಬಕು. ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೆ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ತ್ಯಾಜ್ಯವನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹನಗೋಡು ಗ್ರಾಪಂ. ಅಧ್ಯಕ್ಷೆ ಸಂಗೀತಾ ಸುರೇಶ್, ಪಿಡಿಒ ಅನಿತಾ, ಸಬ್ ಇನ್ಸ್‌ಪೆಕ್ಟರ್ ರಾಧಾ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಚೆನ್ನಯ್ಯ, ದಾ.ರಾ.ಮಹೇಶ್, ಸದಸ್ಯ ಶಿವಣ್ಣ, ಕಿರಂಗೂರು ಸ್ವಾಮಿ, ಮುಖಂಡರಾದ ಶಫಿವುಲ್ಲಾ, ನಸಿಂಸಾಬ್, ಅಕ್ಬರ್, ಪೊಲೀಸ್ ಇಲಾಖೆಯ ಮಂಜು ಸಿದ್ದರಾಜು ಇತರರು ಇದ್ದರು.