ಚನ್ನರಾಯಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. 
ಜಿಲ್ಲೆ

ಗೈರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ರವಿಕುಮಾರ್ ಪಿ. ಕೆ

ಚನ್ನರಾಯಪಟ್ಟಣ: ರೈತರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಕಚೇರಿಯಲ್ಲಿರುವುದಿಲ್ಲ, ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ, ಇನ್ನೂ ಇಲಾಖೆ ಮಾಹಿತಿ ನೀಡಲು ಕೆಡಿಪಿ ಸಭೆಗೂ ಗೈರಾಗಿದ್ದಾರೆ. ಗೈರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಬೇಕು. ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿರಬೇಕು ಎಂದು ನಾಮನಿರ್ದೇಶಿತ ಕೆಡಿಪಿ ಸದಸ್ಯರು ಆಗ್ರಹಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಗೆ ಕೆಲ ಅಧಿಕಾರಿಗಳು ಗೈರಾಗಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಾಮನಿರ್ದೇಶಿತ ಕೆಡಿಪಿ ಸದಸ್ಯ ಯೋಗೀಶ್, ಕಚೇರಿಯಲ್ಲಿ ಅಧಿಕಾರಿಗಳು ಇರುವುದಿಲ್ಲ, ಕರೆ ಮಾಡಿದರೇ ಕರೆ ಸ್ವೀಕರಿಸುವುದಿಲ್ಲ, ಇನ್ನೂ ಸಭೆಗೆ ಸಣ್ಣ ನೀರಾವರಿ, ಕೆಎಸ್‌ಆರ್‌ಟಿಸಿ , ಭೂಮಾಪನ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿ ಬಹುತೇಕ ಇಲಾಖೆಗಳ ಅಧಿಕಾರಿಗಳು ಬಂದಿಲ್ಲ. ಇದು ಮುಂದಿನ ಸಭೆಗೆ ಪುನರಾವರ್ತನೆಯಾಗಬಾರದು. ಸಭೆಗೆ ಬಾರದಿದ್ದ ಅಧಿಕಾರಿಗಳಿಗೆ ಉತ್ತರ ಕೇಳಿ ನೋಟಿಸ್ ನೀಡುವಂತೆ ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ಸವಲತ್ತು ಹಂಚಿಕೆ ಮಾಡುವಾಗ ಅಧಿಕಾರಿಗಳು ರಾಜಕೀಯ ಮಾಡುವುದನ್ನು ಬಿಡಬೇಕು, ಕೃಷಿಭಾಗ್ಯ ಯೋಜನೆಯಡಿ ಅರ್ಜಿ ಹಾಕಿ ಮೂರು ವರ್ಷ ಕಳೆದರೂ ಯೋಜನೆ ಅನುಷ್ಠಾನವಾಗಿಲ್ಲ ಎಂದು ಕೆಡಿಪಿ ಸದಸ್ಯ ಮಧುಸೂದನ್ ಆರೋಪಿಸಿದರು. ಮುಂದುವರಿದು ತಾಲೂಕು ಆರೋಗ್ಯಾಧಿಕಾರಿ ಗುಂಡಾವರ್ತನೆ ತೋರುತ್ತಿದ್ದು, ಅವರು ಸಭೆಗೆ ಬಾರದ ಬಗ್ಗೆ ಮತ್ತು ಹಿರೀಸಾವೆ, ಬೆಳಗೊಳ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒದಗಿಸಲಾಗುವ ಆಹಾರ, ಔಷಧಗಳ ಮಾಹಿತಿ ಇಲ್ಲದೆ ಆಗಮಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸದಸ್ಯ ಕಬ್ಬಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ಪರವಾಗಿ ಶಾಸಕರು ಉತ್ತರ ನೀಡಲು ಮುಂದಾದಾಗ, ಶಾಸಕರು ದಯಮಾಡಿ ಸುಮ್ಮನಿರಬೇಕು. ನಾವು ಅಧಿಕಾರಿಗಳನ್ನು ಪ್ರಶ್ನಿಸಬೇಕಾದರೆ, ಶಾಸಕರು ಮಧ್ಯಪ್ರವೇಶ ಸರಿಯಲ್ಲ. ಇದರಿಂದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗದು, ಎಂದು ಸದಸ್ಯರು ಆರೋಪಿಸಿದರು.

ದಂಡಿಗನಹಳ್ಳಿ ಹೋಬಳಿ ಸಾತೇನಹಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಸಾಲ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. 2019ರಲ್ಲಿ ಸಾಲ ಪಡೆಯಲು ಇಬ್ಬರು ರೈತರು ಅರ್ಹರಿದ್ದರೂ ಸಾಲ ನೀಡಿಲ್ಲ. ಸಾತೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಸಹಕಾರ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಮುಂದಿನ ಕೆಡಿಪಿ ಸಭೆಗೆ ಕರೆಸಬೇಕು. ಇಲ್ಲದಿದ್ದರೆ ಸರಿಯಾದ ಮಾಹಿತಿ ದೊರಕುವುದಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ನಮ್ಮನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ. ಕಾಫಿ ಕುಡಿದು, ಬಿಸ್ಕೆಟ್ ತಿನ್ನುವುದಕ್ಕಲ್ಲ ಎಂದು ಸದಸ್ಯ ವೈ.ಎನ್. ಗುರುಪ್ರಸಾದ್ ಆರೋಪಿಸಿದರು. ಇದಕ್ಕೆ ಮತ್ತೊಬ್ಬ ಕೆಡಿಪಿ ಸದಸ್ಯ ಯೋಗೀಶ್ ಧ್ವನಿಗೂಡಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಉತ್ತರಿಸಿ, ತಾಲೂಕಿನಲ್ಲಿ 58 ಸಾವಿರ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸಲಾಗಿದೆ. ಸಾತೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲದಿಂದ ವಂಚಿತರಾದ ಇಬ್ಬರು ರೈತರಿಗೆ ಇನ್ನು 20 ದಿನದಲ್ಲಿ ಸಾಲ ಕೊಡಿಸಲಾಗುವುದು. ಒಂದು ವೇಳೆ ರೈತರಿಗೆ ನೀಡಬೇಕಿದ್ದ ಸಾಲದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮತೆಗೆದುಕೊಳ್ಳಲಾಗುವುದು ಎಚ್ಚರಿಸಿದರು.

ಹಲವು ನ್ಯಾಯಬೆಲೆ ಅಂಗಡಿಗಳ ಮುಂದೆ ದರಪಟ್ಟಿ ಹಾಕಿಲ್ಲ. ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಜನತೆ ದೂರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್‌ಗೌಡ ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಮುಂದಿನ ಕೆಡಿಪಿ ಸಭೆಗೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಇಲಾಖಾವಾರು ಮಾಹಿತಿಯನ್ನು ವಾರದ ಮುಂಚೆಯೇ ಕೆಡಿಪಿ ಸದಸ್ಯರಿಗೆ ಅಧಿಕಾರಿಗಳು ತಲುಪಿಸುವ ಕೆಲಸವಾಗಬೇಕು, ಸದಸ್ಯರು ಕೇಳಿದಂತೆ ಎಲ್ಲ ಸೊಸೈಟಿಗಳ ಸಿಇಒಗಳನ್ನು ಸಭೆಗೆ ಕರೆಸಲಾಗದು, ಅವರ ಪ್ರತಿನಿಧಿಯಾಗಿ ಸಿಡಿಒ ಆಗಮಿಸುತ್ತಾರೆ. ಇನ್ನು ಕೃಷಿಭಾಗ್ಯ ಯೋಜನೆಯಡಿ ಯಾರೇ ಬಂದರೂ ಯೋಜನೆ ಜಾರಿಗೆ ಅನುದಾನ ಕೊರತೆಯಿಲ್ಲವೆಂದ ಅವರು, ಮಳೆಯಿಂದ ಪಟ್ಟಣದಲ್ಲಿ ರಸ್ತೆಗಳು ಗುಂಡಿಬಿದ್ದಿದ್ದು, ಮಳೆ ನಿಂತ ಕೂಡಲೇ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಸೂಚನೆ ನೀಡಿ, ನಗರ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ. ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗಾಂಜಾ ಮಾರಾಟ ಹೆಚ್ಚಳ: ಪಟ್ಟಣದಲ್ಲಿ ಗಾಂಜಾ ಮಾರಾಟ ಸೇರಿ ಮೆಡಿಕಲ್ ಸ್ಟೋರ್‌ಗಳಲ್ಲಿ ಹೆಚ್ಚಿನ ಸಿರಿಂಜ್ ಮಾರಾಟ, ಮತ್ತಿನ ಔಷಧಗಳು ಮಾರಾಟವಾಗುತ್ತಿದ್ದು, ಈ ಬಗ್ಗೆ ದೂರು ಇರುವ ಕಾರಣ, ಆರೋಗ್ಯ ಇಲಾಖೆ, ಪುರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಮೆಡಿಕಲ್ ಸ್ಟೋರ್‌ಗಳ ಮೇಲೆ ದಾಳಿಗೆ ಮುಂದಾಗಬೇಕು. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ಒಮ್ಮೆಲೆ ಸೇರಿಸಿ ಅವರಿಗೆ ಪೋಕ್ಸೋ ಪ್ರಕರಣದ ಕುರಿತಾಗಿ ಮಾಹಿತಿ ನೀಡುವ ಕೆಲಸವನ್ನು ಆಯಾ ಇಲಾಖೆಗಳು ಮಾಡಬೇಕೆಂದು ಶಾಸಕರು ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಗ್ರೇಡ್-2 ತಹಸೀಲ್ದಾರ್ ನಾಗರಾಜು, ಪುರಸಭೆಯ ಅಧ್ಯಕ್ಷೆ ಕೆ.ಎನ್.ಬನಶಂಕರಿ, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಬಿಇಒ ದೀಪಾ, ಸಿಪಿಐ ರಘುನಂದನ್, ಕೆಡಿಪಿ ನಾಮನಿರ್ದೇಶನ ಸದಸ್ಯರಾದ ಕೆ.ಟಿ.ಮಹೇಶ್, ತೇಜು, ಸಮೀಉಲ್ಲಾ ಭಾಗವಹಿಸಿದ್ದರು.