ಜಿಲ್ಲೆ

ಪಚ್ಚನಾಡಿ ಎಸ್.ಟಿ.ಪಿ.ಯಿಂದ ಜಲತ್ಯಾಜ್ಯ ಬಿಡುಗಡೆ ಗ್ರಾಮಸ್ಥರ ಆಕ್ರೋಶ - ಮೇಯರ್ ಭೇಟಿ ಅಸಲಿ ಬಣ್ಣ ಬಯಲು - ಬಳಕೆಯಾಗದ ಯಂತ್ರೋಪಕರಣ ಬೆಳಕಿಗೆ

ಮಂಗಳೂರು: ಮೂಡುಶೆಡ್ಡೆ ಗ್ರಾಮದ ಪಚ್ಚನಾಡಿಯಲ್ಲಿರುವ 8.75 ಎಂ.ಎಲ್.ಡಿ. ಸಾಮರ್ಥ್ಯದ ಜಲತ್ಯಾಜ್ಯ ಸಂಸ್ಕರಣಾ ಘಟಕ (ಎಸ್.ಟಿ.ಪಿ.)ದಿಂದ ಸಂಸ್ಕರಣೆಗೊಳ್ಳದ ತ್ಯಾಜ್ಯ ನೀರನ್ನು ಮರವೂರುನಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಅಣೆಕಟ್ಟಿಗೆ ಬಿಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಸಂಸ್ಕರಣಾ ಘಟಕಕ್ಕೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟಕದಿಂದ ಹಲವು ವರ್ಷಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಮರವೂರು ಅಣೆಕಟ್ಟಿನ ಕುಡಿಯುವ ನೀರಿಗೆ ಬಿಡುತ್ತಿರುವುದರ ವಿರುದ್ಧ ಗ್ರಾಮಸ್ಥರು ಹಲವು ಬಾರಿ ಧ್ವನಿ ಎತ್ತಿದ್ದರು. ಸಮರ್ಪಕ ವ್ಯವಸ್ಥೆಗಳಿಲ್ಲದ ಕಾರಣ ಹೆಚ್ಚುವರಿ ನೀರು ಹೊರಗೆ ಹೋಗುತ್ತಿದೆ ಎಂದು ಹಿಂದಿನ ಗುತ್ತಿಗೆದಾರರು ತಿಳಿಸಿದ್ದರು. ಆ ಬಳಿಕ ಪಾಲಿಕೆಯ 15ನೇ ಹಣಕಾಸು ಅನುದಾನದಲ್ಲಿ ಕೋಟ್ಯಂತರ ರೂ. ವಿನಿಯೋಗಿಸಿ ಜನರೇಟರ್, ಪಂಪ್ ಮೊದಲಾದುವುಗಳನ್ನು ಅಳವಡಿಸಲಾಗಿದೆ. ಆದರೆ ಈಗಿನ ಗುತ್ತಿಗೆ ವಹಿಸಿ ಕೊಂಡವರು ಒದಗಿಸಲಾದ ಸೌಲಭ್ಯಗಳನ್ನು ಬಳಸಿಕೊಳ್ಳದೆ ಜಲತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ನೇರವಾಗಿ ಹೊರಗೆ ಬಿಡುತ್ತಿದ್ದಾರೆ. ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ವತಿಯಿಂದಲೂ ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.

ಸಂಸ್ಕರಣಾ ಘಟಕದಲ್ಲಿ ನಡೆಯದ ಕೆಲಸ :

ಪಚ್ಚನಾಡಿಯ ಜಲತ್ಯಾಜ್ಯ ಸಂಸ್ಕರಣಾ ಘಟಕ ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗದೆ ಇರುವುದು ಅಲ್ಲಿಗೆ ಭೇಟಿ ನೀಡಿದ ಮೇಯರ್ ಮನೋಜ್ ಕುಮಾರ್ ಹಾಗೂ ಪಾಲಿಕೆ ಸದಸ್ಯೆ ಸಂಗೀತಾ ನಾಯಕ್ ಅವರ ಗಮನಕ್ಕೆ ಬಂದಿದೆ. 80 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ಜನರೇಟರ್ ಬಳಕೆ ಮಾಡದೆ ತುಕ್ಕು ಹಿಡಿಯುತ್ತಿದೆ. ಜಲತ್ಯಾಜ್ಯ ಸಂಸ್ಕರಣಾ ಘಟಕದ ಹಲವು ಪಂಪ್‌ಗಳು ಕೆಟ್ಟು ಹೋಗಿವೆ. ಆದರೆ ಗುತ್ತಿಗೆದಾರರು ಬಿಲ್ ಮೊತ್ತ ಮಾತ್ರ ಪೂರ್ಣ ವಸೂಲಿ ಮಾಡುತ್ತಿದ್ದಾರೆ. 11 ಗ್ರಾಮಗಳ ಜನರು ಈ ಕೊಳಚೆ ಸೇರಿದ ನೀರನ್ನು ಕುಡಿಯಬೇಕಾಗಿರುವುದು ದೌರ್ಬಾಗ್ಯ.

ಗುತ್ತಿಗೆ ಸಂಸ್ಥೆ ಬ್ಲಾೃಕ್ ಲಿಸ್ಟ್‌ಗೆ :

ಮಹಾನಗರ ಪಾಲಿಕೆ ಈ ಜಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಪ್ರಸ್ತುತ ಶಾನ್ ಎಂಟರ್‌ಪ್ರೈಸಸ್‌ನ ಗುತ್ತಿಗೆದಾರ ನಜೀರ್ ಎಂಬವರು ಪಚ್ಚನಾಡಿ, ಕೊಂಗೂರು ಮಠ ಹಾಗೂ ಬಜಾಲ್‌ನ ಜಲತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣಾ ಗುತ್ತಿಗೆ ವಹಿಸಿಕೊಂಡಿದ್ದಾರೆ. ಆದರೆ ಎಸ್.ಟಿ.ಪಿ. ಒಳಗೆ ಕೆಲಸ ಆಗದೆ ಇರುವುದು ಕಂಡು ಬಂದಿದೆ. ಗುತ್ತಿಗೆದಾರರಿಂದ ವಿವರ ಪಡೆಯಲು ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಲತ್ಯಾಜ್ಯವನ್ನು ಸಂಸ್ಕರಿಸದೆ ಹೊರಗೆ ಬಿಡುತ್ತಿರುವ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬಂದಿವೆ. ಗುತ್ತಿಗೆ ಸಂಸ್ಥೆಯನ್ನು ಬ್ಲಾೃಕ್ ಲಿಸ್ಟ್‌ಗೆ ಸೇರಿಸಲಾಗುವುದು. ಸೂಕ್ತ ತನಿಖೆ ನಡೆಸಲಾಗುವುದು ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.

ಸೌಲಭ್ಯ ಕಲ್ಪಿಸಿದರೂ ಮುಗಿಯದ ಸಮಸ್ಯೆ :

ಕಳೆದ 5 ವರ್ಷಗಳಲ್ಲಿ ಪಚ್ಚನಾಡಿ ಎಸ್.ಟಿ.ಪಿ.ಯನ್ನು ಪಾಲಿಕೆ ಹಾಗೂ ಶಾಸಕ ಅನುದಾನದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ 2.7 ಕೋಟಿ ರೂ. ವೆಚ್ಚದಲ್ಲಿ ಪೈಪ್ ಅಳವಡಿಸಲಾಗಿದೆ. ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜನರೇಟರ್, ಪಂಪ್ ಸೇರಿದಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೂ ಇಲ್ಲಿನ ಸಮಸ್ಯೆ ಬಗೆ ಹರಿದಿಲ್ಲ. ಈ ಅವ್ಯವಸ್ಥೆಗೆ ಗುತ್ತಿಗೆ ವಹಿಸಿಕೊಂಡ ನಜೀರ್ ನೇರ ಹೊಣೆ. ಪಾಲಿಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಪಾಲಿಕೆ ಸದಸ್ಯೆ ಸಂಗೀತಾ ನಾಯಕ್ ಹೇಳಿದರು.

ಶಿಕ್ಷಣ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಕರಿಯ, ಗ್ರಾ.ಪಂ. ಉಪಾಧ್ಯಕ್ಷೆ ಬಬಿತಾ ಶೆಟ್ಟಿ, ಸದಸ್ಯರಾದ ಶೇಖರ್, ಸುನಿಲ್, ಸ್ಥಳೀಯರಾದ ಪಿ.ಬಿ.ಕುಮಾರ್, ಉಮೇಶ್, ಪ್ರಶಾಂತ್, ಸುರೇಶ್, ಸಂಪತ್, ನಾಗೇಶ್ ಮೊದಲಾದವರಿದ್ದರು.

19ರಂದು ಗ್ರಾಮಸ್ಥರ ಸಭೆ

ಮರವೂರು ಡ್ಯಾಂನಿಂದ ನೀರು ಕುಡಿಯುತ್ತಿರುವ ಗ್ರಾಮಗಳ ಗ್ರಾಮಸ್ಥರು ಹಾಗೂ ಶಾಸಕ ಡಾ.ಭರತ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಡಿ.19ರಂದು ಈ ಸಂಬಂಧ ಸಭೆ ನಡೆಯಲಿದೆ. ಜಲತ್ಯಾಜ್ಯವನ್ನು ನೇರವಾಗಿ ಡ್ಯಾಂಗೆ ಬಿಡುವುದಕ್ಕೆ ಶಾಶ್ವತ ತಡೆಗಟ್ಟುವ ನಿಟ್ಟಿನಲ್ಲಿ ಈ ಸಭೆ ಮಹತ್ವದ್ದಾಗಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಗ್ರಾಮಸ್ಥರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.