ಜಿಲ್ಲೆ

ದುರ್ಘಟನೆ ಮರುಕಳಿಸುವ ಆತಂಕ

Kodagu

ಮಡಿಕೇರಿ: ಚಾಮುಂಡೇಶ್ವರಿನಗರದಲ್ಲಿ ಬರೆ ಕುಸಿತ ಉಂಟಾಗಿದ್ದು, 2018ರ ದುರ್ಘಟನೆ ಪುನರಾವರ್ತನೆ ಆಗುವುದೇ ಎಂಬ ಆತಂಕ ಮೂಡಿಸಿದೆ. ಬುಧವಾರ ಸಂಜೆಯಿಂದ ಭಾರಿ ಮಳೆ ಸುರಿದ ಪರಿಣಾಮ, ರಾತ್ರಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದರಿಂದ ಅಪಾಯದಂಚಿನಲ್ಲಿದ್ದ 5 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ರಾತ್ರೋರಾತ್ರಿ ಸ್ಥಳಾಂತರ ಮಾಡಲಾಗಿದೆ.

2 ವರ್ಷ ಕಾಡಿದ್ದ ಮಳೆ: ಸತತ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಹಾಮಳೆಯ ಭೀತಿ ಕಾಡುತ್ತಿದೆ. 2018ರಲ್ಲಿ ಪ್ರಕೃತಿ ವಿಕೋಪ ಹಾಗೂ 2019ರಲ್ಲಿ ಜಲಪ್ರವಾಹ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮತ್ತೆ ಈಗ ಮಹಾಮಳೆಯ ಕಾರ್ಮೋಡ ಕವಿದಿದ್ದು, ಜನರಲ್ಲಿ ಭವಿಷ್ಯದ ಚಿಂತೆ ಮೂಡಿದೆ. ಬುಧವಾರ ಸುರಿದ ಮಳೆಯಿಂದ ಮಡಿಕೇರಿಯ ಚಾಮುಂಡೇಶ್ವರಿನಗರದ ಶ್ಯಾಂ ಎಂಬುವರ ಮನೆಯ ಹಿಂಭಾಗದ ಬರೆ ಕುಸಿದಿದೆ. ಪರಿಣಾಮ, ಸ್ಥಳೀಯ ಕೆಲವು ಕುಟುಂಬಗಳು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡು ಆಶ್ರಯ ಪಡೆದಿದ್ದು, ಉಳಿದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಅಧಿಕಾರಿಗಳ ಭೇಟಿ: ಬರೆ ಕುಸಿತದ ಮಾಹಿತಿ ಸಿಕ್ಕ ಕೂಡಲೆ ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರವಾಗುವಂತೆ ಮನವಿ ಮಾಡಿದರು. ಬಳಿಕ ಸ್ಥಳಕ್ಕೆ ಬಂದ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಹಾಗೂ ಭೂವಿಜ್ಞಾನಿ ಅನನ್ಯಾ ವಾಸುದೇವ್, ಇಡೀ ಬಡಾವಣೆಯ ಸ್ಥಳಾಂತರಕ್ಕೆ ನಿರ್ದೇಶನ ನೀಡಿದರು. ಆನಂತರ ಶ್ಯಾಂ ಅವರ ಮನೆಯ ಹಿಂಭಾಗದಲ್ಲಿದ್ದ ಜಾಫರ್, ಜಿನಾತ್ ಎಂಬ ವೃದ್ಧ ದಂಪತಿಯನ್ನು ಸ್ಥಳಾಂತರಿಸಲಾಗಿದೆ.

2018ರಲ್ಲಿ ಕುಸಿದಿದ್ದ ಮನೆಗಳು: 2018ರಲ್ಲಿ ಹಲವು ಮನೆಗಳು ಕುಸಿದಿದ್ದವು. 2019ರಲ್ಲಿ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಕುಟುಂಬಗಳು ಸುರಕ್ಷಿತ ಪ್ರದೇಶಗಳತ್ತ ತೆರಳಿದ್ದವು. ಈ ವರ್ಷವೂ ಅಂಥದ್ದೇ ಭಯ ಆವರಿಸಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಎತ್ತರ ಹಾಗೂ ತಗ್ಗು ಪ್ರದೇಶದಲ್ಲಿ ಈ ಬಡಾವಣೆ ಇದ್ದು, ಅಪಾಯ ಸಂಭವಿಸುವ ಲಕ್ಷಣಗಳಿವೆ. ಮಣ್ಣು ತೇವವಾಗುತ್ತಿದ್ದು, ಅಪಾಯದ ಮುನ್ಸೂಚನೆ ಇದೆ ಎಂದು ಸ್ಥಳ ಪರಿಶೀಲನೆ ಸಂದರ್ಭ ಭೂವಿಜ್ಞಾನಿ ಅನನ್ಯಾ ವಾಸುದೇವ್ ತಿಳಿಸಿದ್ದಾರೆ. ಬಡಾವಣೆಯಲ್ಲಿ ಅಂದಾಜು 500 ಮನೆಗಳು ಇರುವುದಾಗಿ ಅಂದಾಜಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಕೆಲವರಿಗೆ ನೋಟಿಸ್ ನೀಡಲಾಗಿದೆ.

ಸುರಕ್ಷಿತ ಸ್ಥಳಕ್ಕೆ ನಿವಾಸಿಗಳು: ಚಾಮುಂಡೇಶ್ವರಿನಗರ ಸೇರಿದಂತೆ ಇನ್ನಿತರ ಅಪಾಯಕಾರಿ ಪ್ರದೇಶಗಳಿಂದ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ನಿವಾಸಿಗಳು ಮನಸ್ಸು ಮಾಡಿದ್ದಾರೆ. ಈಗಾಗಲೇ ಕೆಲವರು ಮನೆ ಖಾಲಿ ಮಾಡಿದ್ದಾರೆ. 2018ರಲ್ಲಿ ಮಹಾಮಳೆಗೆ ಸಿಲುಕಿ ಮನೆ ಕಳೆದುಕೊಂಡ ಹಾಗೂ ಮನೆಗಳು ವಾಸಿಸಲು ಯೋಗ್ಯವಲ್ಲದ 123 ಕಟುಂಬಗಳಿಗೆ ಜಂಬೂರುವಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಕೆಲವರು ತಾವು ಇಲ್ಲೇ ಇರುವುದಾಗಿ ಹಠ ಹಿಡಿದಿದ್ದಾರೆ. ಆದರೆ, ಅಪಾಯದ ಬಗ್ಗೆ ಅಧಿಕಾರಿಗಳು ಮನವೊಲಿಸಿ ಸ್ಥಳಾಂತರಕ್ಕೆ ಮುಂದಾಗುತ್ತಿದ್ದಾರೆ.

ಬಡಾವಣೆಯನ್ನೇ ಸ್ಥಳಾಂತರಿಸಲು ನಿರ್ಧಾರ?: ಬುಧವಾರ ರಾತ್ರಿ 8.30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ತೆರಳಿದರು. ಆನಂತರ ಬಂದ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಹಾಗೂ ಭೂವಿಜ್ಞಾನಿ ಅನನ್ಯಾ ವಾಸುದೇವ್, ಇಡೀ ಬಡಾವಣೆಯ ಜನರನ್ನು ಸ್ಥಳಾಂತರ ಮಾಡುವಂತೆ ನಿರ್ದೇಶನ ನೀಡಿದರು. ಪೊಲೀಸ್ ರಕ್ಷಣಾ ಪಡೆ ಮೈಕ್ ಮೂಲಕ ಜನರಿಗೆ ಸಂದೇಶ ನೀಡಲು ತಯಾರಿ ನಡೆಸಿತ್ತು. ಆದರೆ, ರಾತ್ರಿ 11 ಗಂಟೆ ಬಳಿಕ 5 ಕುಟುಂಬಗಳನ್ನು ಮಾತ್ರ ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಯಿತು. ಕೆಲಕಾಲ ಇದು ಸ್ಥಳೀಯರಲ್ಲಿ ಗೊಂದಲ ಮೂಡಿಸಿತು. ಅಪಾಯದಲ್ಲಿದ್ದ ಐದು ಮನೆಯವರು ರಾತ್ರೋರಾತ್ರಿ ಗಂಟುಮೂಟೆ ಕಟ್ಟಿ, ತಮ್ಮ ಸಾಕುಪ್ರಾಣಿಗಳ ಸಹಿತ ಸಂಬಂಧಿಕರ ಮನೆಗಳಿಗೆ ತೆರಳಿದರು.

123 ಕುಟುಂಬಗಳಿಗೆ ಜಂಬೂರುವಿನಲ್ಲಿ ಮನೆ: ಇಂದಿರಾನಗರ, ಚಾಮುಂಡೇಶ್ವರಿನಗರದ 123 ಕುಟುಂಬಗಳಿಗೆ ಜಂಬೂರುವಿನಲ್ಲಿ ಮನೆ ನೀಡಲಾಗಿದೆ. ನೆರೆ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗೆ ಶೀಘ್ರ ಸ್ಥಳಾಂತರವಾಗುವಂತೆ ಹೇಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ. ಉಳಿದಂತೆ, ಅಪಾಯದಂಚಿನಲ್ಲಿರುವ 127 ಮನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ನೇತೃತ್ವದಲ್ಲಿ ರೂಪುಗೊಂಡಿರುವ ಪೊಲೀಸ್ ರಕ್ಷಣಾ ಪಡೆ ಚಾಮುಂಡೇಶ್ವರಿನಗರದ 5 ಕುಟುಂಬಗಳ ಸ್ಥಳಾಂತರಕ್ಕೆ ಸಹಾಯ ಮಾಡಿತು. ಹಾಸಿಗೆ ಹಿಡಿದಿದ್ದ ವೃದ್ಧನನ್ನು ಹೊತ್ತೊಯ್ದು ವಾಹನದ ಮೂಲಕ ಸ್ಥಳಾಂತರಿಸಿದರು. ಭಾನುಪ್ರಕಾಶ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.

ಬುಧವಾರ ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, ಆ ಪ್ರದೇಶದಲ್ಲಿದ್ದ 5 ಕುಟುಂಬಗಳನ್ನು ಸುರಕ್ಷತಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಪರಿಹಾರ ಕಾರ್ಯಾಚರಣೆ ತಂಡ ಹತ್ತಿರದಲ್ಲೇ ಬೀಡು ಬಿಟ್ಟಿದ್ದು, ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ.
ಅನೀಸ್ ಕಣ್ಮಣಿ ಜಾಯ್, ಜಿಲ್ಲಾಧಿಕಾರಿ

ದೊಡ್ಡ ಮಟ್ಟದ ಅನಾಹುತವಾಗಿಲ್ಲ. ಶ್ಯಾಂ ಕುಟುಂಬಕ್ಕೆ ಜಂಬೂರುವಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲದೆ, ಇತ್ತೀಚೆಗೆ 123 ಕುಟುಂಬಗಳಿಗೆ ಜಂಬೂರುವಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ 5 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಎಲ್ಲ ರೀತಿಯ ಮುಂಜಾಗ್ರತೆ ವಹಿಸಲಾಗಿದೆ.
ಶ್ರೀನಿವಾಸ್, ಪೌರಾಯುಕ್ತ, ಮಡಿಕೇರಿ ನಗರಸಭೆ

ಬುಧವಾರ ರಾತ್ರಿ ನಮ್ಮ ಮನೆಯ ಹಿಂಭಾಗದಲ್ಲಿ ಬರೆ ಕುಸಿದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ನೀಡುವ ಭರವಸೆ ನೀಡಿದ್ದಾರೆ. ಹೊಸ ಮನೆಯ ಕೀಲಿ ಕೈ ಸಿಕ್ಕಿದ ಕೂಡಲೇ ಮನೆ ಖಾಲಿ ಮಾಡುತ್ತೇವೆ.
ಎಸ್.ಕಾವೇರಿ, ಚಾಮುಂಡೇಶ್ವರಿನಗರ ನಿವಾಸಿ