ಬೆಳ್ತಂಗಡಿ: ಪ್ರಕೃತಿ ವಿಕೋಪದಂತಹ ಅವಘಡ ಸಂಭವಿಸಿದಾಗ ಕೇವಲ ಸರ್ಕಾರಿ ವ್ಯವಸ್ಥೆಯನ್ನು ಅವಲಂಬಿಸದೆ ಎಲ್ಲರೂ ತುರ್ತು ಸೇವೆಗೆ ಸನ್ನದ್ಧ ರಾಗಬೇಕು. ಸ್ವಯಂರಕ್ಷಣೆ ಜತೆಗೆ ಇನ್ನೊಬ್ಬರನ್ನು ಕಾಪಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಿಸಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ದ.ಕ ಜಿಲ್ಲೆ ಸಹಭಾಗಿತ್ವದಲ್ಲಿ ಎನ್‌ಡಿಆರ್‌ಎಫ್ ತಜ್ಞರಿಂದ ಆಯೋಜಿಸಿದ್ದ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ, ವಿಪತ್ತು ನಿರ್ವಹಣೆ ತರಬೇತಿ ಕಾರ್ಯ ಶ್ಲಾಘನೀಯ. ಇದೊಂದು ದೊಡ್ಡ ಸೇವೆ. ರಾಜ್ಯಾದ್ಯಂತ ತರಬೇತಿ ವಿಸ್ತರಿಸುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಮಾದರಿ ಎಂದರು.
ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ.ಸುರೇಂದ್ರ ಕುಮಾರ್, ಎನ್‌ಡಿಆರ್‌ಎಫ್ ಚೀಫ್ ಕಮಾಡೆಂಟ್ ಗೋಪಾಲ್‌ಲಾಲ್ ಮೀನಾ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಬೂದಪ್ಪ ಗೌಡ ವಂದಿಸಿದರು. ಉಪನ್ಯಾಸಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯಾದ್ಯಂತ ವಿಪತ್ತು ಸ್ಪಂದನೆ ತಂಡ
ಅನಾಹುತಗಳು ಸಂಭವಿಸಿದಾಗ ತುರ್ತು ಕಾರ್ಯಾಚರಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವಯಂಸೇವಕರನ್ನು ಒಳಗೊಂಡ ವಿಪತ್ತು ಸ್ಪಂದನೆ ತಂಡವನ್ನು ರಚಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು. ಇದಕ್ಕೆ ತಾಲೂಕಿನಲ್ಲಿ ಇನ್ನೂರು ಸದಸ್ಯರ ತಂಡ ರಚಿಸಲಾಗುತ್ತಿದ್ದು, ರಾಜ್ಯಾದ್ಯಂತ 55 ತಾಲೂಕುಗಳಲ್ಲಿ ವಿಸ್ತರಣೆಯಾಗಲಿದೆ. ತಂಡಕ್ಕೆ ಎನ್‌ಡಿಆರ್‌ಎಫ್‌ನಿಂದ ತರಬೇತಿ ನೀಡಿ ಅವರಿಗೆ ಸುರಕ್ಷತಾ ಉಪಕರಣಗಳನ್ನು ನೀಡಲಾಗುತ್ತದೆ ಎಂದರು.