ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ವಿದ್ಯುತ್ ವಿತರಣಾ ಕೇಂದ್ರದಿಂದ ಖಾಂಡ್ಯ ಮಾರ್ಗವಾಗಿ ಉಜ್ಜಿನಿ ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್‌ಲೈನ್‌ಅನ್ನು ಮೆಸ್ಕಾಂನವರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜೇನುಗದ್ದೆ ವಿತರಣಾ ಕೇಂದ್ರದಿಂದ ಉಜ್ಜಿನಿ ಮುಂತಾದ ಗ್ರಾಮಗಳಿಗೆ ವಿದ್ಯುತ್ ಸರಬರಾಜಾಗುವ 11ಕೆವಿ ಲೈನ್ ಈ ಹಿಂದೆ ಅರಣ್ಯದ ಮಧ್ಯಭಾಗದಲ್ಲಿದ್ದು, ಕಳೆದ ಕೆಲವು ದಿನಗಳಿಂದ ಲೈನನ್ನು ಖಾಂಡ್ಯ-ಉಜ್ಜಿನಿ ರಸ್ತೆಯ ಬದಿಗೆ ವರ್ಗಾವಣೆ ಮಾಡಲು ಕಾಮಗಾರಿ ಆರಂಭಗೊಂಡಿತ್ತು. ಆದರೆ ಲೈನ್ ನಿರ್ಮಾಣ ಮಾಡುವಾಗ ಮೆಸ್ಕಾಂನವರು ಲೈನನ್ನು ಮಾರ್ಗದ ಒಂದೇ ಬದಿಯಲ್ಲಿ ಮಾಡದೇ ಎರಡೂ ಬದಿಗಳಲ್ಲಿ ವಿದ್ಯುತ್ ಕಂಬಗಳನ್ನು ನೆಟ್ಟು ಅಸಮರ್ಪಕವಾಗಿ ನಿರ್ವಹಿಸಿದ್ದಾರೆ. ಸುಮಾರು ನಾಲ್ಕು ಕಿಮೀ ದೂರದವರೆಗೂ ಇದೇ ರೀತಿ ಅಸಮರ್ಪಕವಾಗಿಲೈನನ್ನು ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆಗೆ ತಾಗಿಕೊಂಡಂತೆ ವಿದ್ಯುತ್ ಕಂಬಗಳನ್ನು ನೆಟ್ಟಿದ್ದು ಹಲವು ಕಡೆಗಳಲ್ಲಿ ತಿರುವು ಜಾಗದಲ್ಲಿ ಸಹ ಕಂಬಗಳನ್ನು ನೆಡಲಾಗಿದೆ. ಕೆಲವು ಕಡೆಗಳಲ್ಲಿ ಬೃಹತ್ ಗಾತ್ರದ ಮರದ ಕೆಳಗೆ ಕಂಬಗಳನ್ನು ನೆಟ್ಟು ಲೈನ್ ಮಾಡಿದ್ದಾರೆ. ರಸ್ತೆ ಬದಿ ಮತ್ತು ತಿರುವಿನಲ್ಲಿ ಕಂಬಗಳನ್ನು ನೆಟ್ಟಿರುವುದರಿಂದ ವಾಹನಗಳು ಎದುರುಬದುರಾದಾಗ ಸೈಡ್ ಬಿಡಲು ಆಗುತ್ತಿಲ್ಲ. ಮರದ ಕೆಳಗೆ ವಿದ್ಯುತ್ ಲೈನ್ ಹಾದುಹೋಗಿರುವುದರಿಂದ ಮಳೆ, ಗಾಳಿ ಸಂದರ್ಭದಲ್ಲಿ ಆಗಾಗ ಮರದ ರೆಂಬೆಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಲಿದೆ. ದಾರಿಯಲ್ಲಿ ಸಂಚರಿಸುವವರ ಮೇಲೆಯೂ ಲೈನ್ ಬಿದ್ದು ಸಮಸ್ಯೆಯಾಗುವ ಆತಂಕವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯುತ್ ಲೈನ್ ಅನ್ನು ಸಮರ್ಪಕವಾಗಿ ಮಾಡಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.