ಬೆಂ. ಗ್ರಾಮಾಂತರ: ರಾಜ್ಯ ಸರ್ಕಾರ ಸೆ.21ರ ಬಳಿಕ 9, 10 ನೇ ತರಗತಿ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲು ನೀಡಿದ್ದ ಅವಕಾಶ ರದ್ದುಪಡಿಸಿದ ಬೆನ್ನಲ್ಲೇ ಶಾಲೆಗೆ ಹೋಗಲು ಉತ್ಸುಕರಾಗಿದ್ದ ಮಕ್ಕಳ ಆಸೆಗೆ ತಣ್ಣೀರು ಎರಚಿದಂತಾಗಿದೆ.
21ರ ಬಳಿಕ ಎಷ್ಟು ಮಕ್ಕಳು ಶಾಲೆಗೆ ಬರುತ್ತಾರೆ. ಅವರ ಪಾಲಕರ ಅಭಿಪ್ರಾಯವೇನು ಎಂಬುದರ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುವ ಬಗ್ಗೆ ಜಿಲ್ಲಾ ಸಾರ್ವಜನಿಕ ಇಲಾಖೆ ಚಿಂತನೆ ನಡೆಸಿತ್ತು. ಇದೀಗ ಮತ್ತೆ ಶಾಲಾ ಪ್ರವೇಶ ಮುಂದೂಡಿಕೆಯಿಂದ ಮುಂದಿನ ಆದೇಶದಂತೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸದ್ಯಕ್ಕೆ ವಿದ್ಯಾಗಮ ಯೋಜನೆಯಡಿಯೇ ಕಲಿಕಾ ಚಟುವಟಿಕೆಗಳನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆಸಿದೆ.
ಕರೊನಾ ಮುಂಜಾಗ್ರತೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಪೂರೈಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗೆ ಬರುವ ಮಕ್ಕಳಿಗೂ ಇದೇ ನಿಯಮದಡಿ ಕಲಿಕಾ ಚಟುವಟಿಕೆ ನಡೆಸುವ ಸವಾಲು ಸ್ವೀಕರಿಸಿದೆ. ಈಗಾಗಲೇ ಶಾಲೆಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿದ್ದು, ಕರೊನಾ ನಿಯಮಗಳ ಬಗ್ಗೆ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯೂ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ರೂಪಿಸಲಾಗಿದೆ.
ಚಂದನ ವಾಹಿನಿ ಸಂದೇಹ ನಿವಾರಣೆ: ಈಗಾಗಲೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಠ್ಯ ಚಟುವಟಿಕೆಗಳ ಬಗ್ಗೆ ಸಂದೇಹಗಳಿದ್ದರೆ ಅದನ್ನು ಗುರುತು ಮಾಡಿಕೊಂಡು ಶಾಲೆಗೆ ಬರುವ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಚರ್ಚಿಸಿ ಸಂದೇಹ ಪರಿಹರಿಸಿಕೊಳ್ಳಬಹುದು. ಈ ಬಗ್ಗೆ ಶಿಕ್ಷಕರೂ ಸಹ ಸಿದ್ಧರಾಗಿದ್ದು ಯಾವಾಗ ಸರ್ಕಾರದಿಂದ ಹಸಿರು ನಿಶಾನೆ ದೊರೆಯುತ್ತದೋ ಆ ವೇಳೆ ವಿದ್ಯಾರ್ಥಿಗಳನ್ನು ಎದುರುಗೊಳ್ಳಲು ಶಿಕ್ಷಕರು ಸನ್ನದ್ಧರಾಗಿದ್ದಾರೆ.
ಈಗಾಗಲೇ ವಿದ್ಯಾಗಮ ಯೋಜನೆಯಡಿ ಶಿಕ್ಷಕರು ತೊಡಗಿಸಿಕೊಂಡಿದ್ದು, ಹೈಸ್ಕೂಲ್ ವಿದ್ಯಾರ್ಥಿಗಳು ಶಾಲೆಗಳಿಗೆ ಬಂದರೆ ಅವರೊಂದಿಗೆ ಪಠ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲು ಶಿಕ್ಷಕ ವರ್ಗವೂ ಪೂರ್ವ ಸಿದ್ಧತೆ ನಡೆಸಿದೆ. 1 ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಯೋಜನೆಯಡಿಯೇ ಪಠ್ಯ ಚಟುವಟಿಕೆಗಳು ನಡೆಯಲಿದ್ದು, ಸರ್ಕಾರದ ಮುಂದಿನ ಆದೇಶದಂತೆ 9 ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆಯಾ ಶಾಲೆಗಳಲ್ಲೇ ಚಟುವಟಿಕೆ ನಡೆಸುವ ಚಿಂತನೆ ನಡೆದಿದೆ.
---
ಬಾಕ್ಸ್()
ಪಾಲಕರಲ್ಲೂ ಗೊಂದಲ:
ಒಂದೆಡೆ ಕರೊನಾತಂಕವಾದರೆ ಮತ್ತೊಂದೆಡೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಪಾಲಕರು ಆತಂಕಗೊಂಡಿದ್ದಾರೆ. ವಿದ್ಯಾಗಮ ಯೋಜನೆಯಡಿ ನಡೆಯುತ್ತಿರುವ ಕಲಿಕಾ ಚಟುವಟಿಕೆ ಬಗ್ಗೆ ಸಾಕಷ್ಟು ಪಾಲಕರು ಅಪಸ್ವರ ಎತ್ತಿದ್ದಾರೆ. ಅರಳಿ ಕಟ್ಟೆ ದೇಗುಲಗಳಂತ ಪ್ರದೇಶದಲ್ಲಿ ಪಾಠ ಮಾಡುವುದಕ್ಕಿಂತ ಶಾಲೆಯಲ್ಲೇ ಕರೊನಾ ನಿಯಮ ಪಾಲನೆಯೊಂದಿಗೆ ಚಟುವಟಿಕೆ ನಡೆಸಬಹುದೆಂಬ ಬಗ್ಗೆ ಸಾಕಷ್ಟು ಪಾಲಕರು ಒಲವು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಈ ಬಾರಿ ಎಸ್ಸೆಸ್ಸೆಲ್ಸಿ ಬರೆಯಲಿರುವ ವಿದ್ಯಾರ್ಥಿ ಪಾಲಕರು ಸಾಕಷ್ಟು ಗೊಂದಲದಲ್ಲಿದ್ದಾರೆ.
ಖಾಸಗಿ ಶಾಲೆಗಳ ಮೇಲೆ ನಿಗಾ: ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲದೆ ಖಾಸಗಿ ಶಾಲೆಗಳಲ್ಲೂ ಸರ್ಕಾರದ ಸುತ್ತೋಲೆ, ನಿಯಮಗಳ ನ್ನು ಗಾಳಿಗೆ ತೂರುವುದು ಅಥವಾ ಇಷ್ಟಬಂದಂತೆ ನಡೆದುಕೊಂಡರೆ ಅಂಥ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಎಚ್ಚರಿಕೆ ನೀಡಿದ್ದಾರೆ.
ಸದ್ಯಕ್ಕೆ ಸರ್ಕಾರದ ಮುಂದಿನ ಆದೇಶದ ನಿರೀಕ್ಷೆಯಲ್ಲಿದ್ದೇವೆ. ವಿದ್ಯಾಗಮ ಯೋಜನೆಯಡಿ ಕಲಿಕಾ ಚಟುವಟಿಕೆ ಮುಂದುವರಿಯಲಿದೆ. ಸರ್ಕಾರದ ಸುತ್ತೋಲೆಯಂತೆ ಶಾಲೆಗಳಲ್ಲಿ ಕಲಿಕಾ ಚಟುವಟಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗುವುದು, ಮುಖ್ಯವಾಗಿ ಕರೊನಾ ನಿಯಮ ಪಾಲನೆ ಕಡ್ಡಾಯವಾಗಲಿದೆ. ಗಂಗಮಾರೇಗೌಡ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ