ಜಿಲ್ಲೆ

ನಾಗಮಂಗಲದಲ್ಲಿ ನೀರಸ ಪ್ರತಿಕ್ರಿಯೆ

Mysuru - Desk - Naveen Kumar H P


ಮಂಡ್ಯ: ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಾಗಮಂಗಲ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಸಂಘಟನೆಗಳ ಮುಖಂಡರು ಪ್ರತಿಭಟನಾ ರ‌್ಯಾಲಿ ನಡೆಸಿ ಮನವಿ ಮಾಡಿದರೂ ಕ್ಯಾರೆ ಎನ್ನದ ವ್ಯಾಪಾರಸ್ಥರು ಎಂದಿನಂತೆ ಅಂಗಡಿ, ಮುಂಗಟ್ಟು ತೆರೆದು ವ್ಯಾಪಾರ ನಡೆಸಿದರು.


ಪಟ್ಟಣದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘಟನೆ, ದಲಿತ ಸಂಘಟನೆ, ಕರ್ನಾಟಕ-ರಾಜಸ್ಥಾನಿ ವರ್ತಕರ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನಾ ರ‌್ಯಾಲಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜಿಎಸ್ ವೃತ್ತದಿಂದ ಪಟ್ಟಣದ ಮಂಡ್ಯ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ನಂತರ ಮಂಡ್ಯ ವೃತ್ತದಲ್ಲಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಬಿಂಡಿಗನವಿಲೆ, ಬೆಳ್ಳೂರು ಕ್ರಾಸ್‌ನಲ್ಲಿಯೂ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.

ಮಂಡ್ಯ ವೃತ್ತದಲ್ಲಿ ತಹಸೀಲ್ದಾರ್ ನಯೀಂ ಉನ್ನಿಸಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಮುಖಂಡರಾದ ಕಂಚಿನಕೋಟೆ ಮೂರ್ತಿ, ಕ್ಯಾತನಹಳ್ಳಿ ಮಂಜುನಾಥ್, ಸುರೇಶ್, ರಂಗೇಗೌಡ, ದಡಿಗ ಸತೀಶ್, ಗೋಪಾಲಕೃಷ್ಣ, ಸಂತೋಷ್, ಕೆಂಪೇಗೌಡ, ಆಟೋಶಿವಣ್ಣ, ಹರೀಶ್ ಇತರರು ಇದ್ದರು.