ಬಳ್ಳಾರಿ ; ಪರಿಸರ ಸಂರಕ್ಷಣಾ ಮತ್ತು ಗಣಿ ಸಮಾಪನಾ ಯೋಜನೆ ಅನುಷ್ಠಾನದ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿದೇರ್ರ್ಶಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅಸಮಾಧಾನ ಹೊರ ಹಾಕಿದರು.
ಮಂಗಳವಾರ ವಿಧಾನಪರಿಷತ್ ಅಧಿವೇಶನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಷಯ ಪ್ರಸ್ತಾಪಿಸಿ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಪಟ್ಟಾ ಭೂಮಿಗಳಲ್ಲಿ ಲ್ಯಾಟರೈಟ್ ಗಣಿಗಾರಿಕೆ ಲೈಸನ್ಸ್ ನೀಡಲಾಗಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಗಣಿ ಲೈಸನ್ಸ್‌ಗಳ ವಿಷಯದ ಪ್ರಸ್ತಾವನೆ ವೇಳೆ ಅಧಿಕಾರಿಯ ಬೇಜವಾಬ್ದಾರಿತನ ಮತ್ತು ನಿರಾಸಕ್ತಿ ವಿವರಿಸಿದರು.
ಕಳೆದ ಮಾರ್ಚ್ ತಿಂಗಳ ನಂತರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಕಚೇರಿಗೆ ನಾಲ್ಕು ಪತ್ರಗಳು ಬರೆದಿರುವೆ. ಅಲ್ಲದೇ, ಐಎಎಸ್ ಅಧಿಕಾರಿ ಆಗಿರುವ ನಿರ್ದೇಶಕರನ್ನು ಖುದ್ದಾಗಿ ಕಚೇರಿಯಲ್ಲಿ ಭೇಟಿ ಮಾಡಿ, ನನ್ನ ಪತ್ರಗಳಿಗೆ ಉತ್ತರ ಕೇಳಿರುವೆ. ಆದರೆ, ಅಧಿಕಾರಿಯ ವರ್ತನೆಯು ತೀರ ಬೇಜವಾಬ್ದಾರಿತನದಿಂದ ಕೂಡಿತ್ತು. ನನ್ನ ಪ್ರಶ್ನೆಗಳಿಗೆ ಅತ್ಯಂತ ತಾಳ್ಮೆಯಿಂದ ಉತ್ತರ ನಿರೀಕ್ಷಿಸಿದ್ದೆ. ಅಧಿಕಾರಿಯು ಈ ಕ್ಷಣದವರೆಗೂ ಉತ್ತರ ನೀಡಿಲ್ಲ. ಅಧಿಕಾರಿಯು ಆ ಹುದ್ದೆಯಲ್ಲಿ ನಿರಾಸಕ್ತಿ ಹಾಗೂ ಅಸಮರ್ಥರಾಗಿದ್ದಾರೆ. ಈ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಗಣಿಗಳ ಲೈಸನ್ಸ್ ನೀಡುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾಯ್ದೆ ಉಲ್ಲಂಘನೆಯಾಗಿದೆ. ದಕ್ಷಿಣ ಕನ್ನಡದಲ್ಲಿ 19 ಮತ್ತು ಬೆಳಗಾವಿಯಲ್ಲಿ 02 ಲ್ಯಾಟರೇಟ್ ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 11 ಲ್ಯಾಟರೇಟ್ ಗಣಿಗಳು ಸ್ಥಗಿತಗೊಂಡಿವೆ. ಅದರಲ್ಲಿ ಗಣಿ ಸಮಾಪನಾ ಯೋಜನೆ ಯಾರು ಜಾರಿ ಮಾಡುತ್ತಾರೆ? ಯಾರು ಹೊಣೆಗಾರರು? ಎಂಬುದಾಗಿ ಎಲ್ಲಿಯೂ ಸ್ಪಷ್ಟವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ಶಾಸಕರ ಜತೆಯಲ್ಲಿ ವ್ಯವಹರಿಸುವಾಗ ಬೇಜವಾಬ್ದಾರಿ ಹಾಗೂ ಪತ್ರಗಳಿಗೆ ಉತ್ತರ ನೀಡದ ಅಧಿಕಾರಿ ಯಾರು? ಎಂಬುದು ಗುರುತಿಸಿ ಶಿಸ್ತುಕ್ರಮ ಕೈಗೊಳ್ಳಿರಿ ಎಂದು ತಾಕೀತು ಮಾಡಿದರು.
ಬಳಿಕ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರು ಮತ್ತು ಕಾರ್ಯದರ್ಶಿ ಜತೆ ಚರ್ಚಿಸಿ ನಿರ್ದೇಶಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಭರವಸೆ ನೀಡಿದರು.