ಚಿಕ್ಕಬಳ್ಳಾಪುರ:ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಜಿ.ಪಂ.ಸಿಇಒ ಡಾ. ವೈ. ನವೀನ್ ಭಟ್ ಸೂಚಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ “ಜಲಜೀವನ್ ಮಿಷನ್ ಯೋಜನೆಯಡಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ನೀರು ಮತ್ತು ನೈರ್ಮಲ್ಯ ಟಾಸ್ಕ್ ಪೋರ್ಸ್ ಸಮಿತಿ”ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಅನುದಾನದಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾದ ಕೂಡಲೇ ವಿದ್ಯುತ್ ಸಂಪರ್ಕ, ಪಂಪ್ ಮೋಟಾರ್ ಅಳವಡಿಸಿ ಸರ್ಮಪಕವಾಗಿ ಪೂರೈಸಬೇಕು. ಇದು ನಿಗದಿತ ಕಾಲಮಿತಿಯೊಳಗೆ ನಿರ್ವಹಣೆಯಾಗಬೇಕು ಎಂದರು.
ಕೆಲವೆಡೆ ಬೋರ್ ವೆಲ್ ಕೊರೆದು ಹಲವು ತಿಂಗಳಾದರೂ, ನೀರು ಇದ್ದರೂ ಸಹ ಬಳಸದಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಮುಂಬರುವ ದಿನಗಳಲ್ಲಿ ಇಂತಹ ದೂರುಗಳು ಕೇಳಿ ಬರಬಾರದು. ಸಮರ್ಪಕ ನೀರು ಪೂರೈಕೆಗಾಗಿ ಜಲಜೀವನ್ ಮಿಷನ್ ಯೋಜನೆಯು ಸಹಕಾರಿ. ಇದರಡಿ ಅಗತ್ಯವಿರುವೆಡೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಖಾಸಗಿ ಕೊಳವೆ ಬಾವಿ ಬಳಕೆ ಅನಿವಾರ್ಯತೆ ಸಂದರ್ಭದಲ್ಲಿ ಕಡ್ಡಾಯವಾಗಿ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆಯಬೇಕು ಎಂದರು.
ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟೇಶರೆಡ್ಡಿ ಮತ್ತಿತರರು ಇದ್ದರು.
*ನೀರು ಸಂಗ್ರಹಣ ಘಟಕ ಸ್ವಚ್ಛತೆ*
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೀರು ಪೂರೈಸುವ 945 ಒವರ್ ಹೆಡ್ ಟ್ಯಾಂಕ್ ಗಳಿವೆ. ಇದರ ತಾಣಗಳ ಸುತ್ತಲು ನೀರು ಸೋರಿಕೆಯಾಗಿ ಅನೈರ್ಮಲ್ಯ ಹಾಗೂ ಕೀಟ ಜನ್ಯ ಕಾಯಿಲೆಗಳ ಹರಡುವಿಕೆಯ ವಾತಾವರಣ ನಿರ್ಮಾಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ಕೈಗೊಂಡು, ಟ್ಯಾಂಕ್ ನಲ್ಲಿ ನೀರು ಸೋರಿಕೆ ತಾಣ, ದುರಸ್ತಿ ನಿರೀಕ್ಷೆ ಸೇರಿದಂತೆ ಇತರ ಮಾಹಿತಿಯ ವರದಿಯನ್ನು ಸಲ್ಲಿಸಲು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು.
*ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆ*
ತಾಯಂದಿರು ಹಾಗೂ ಮಗುವಿನ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಬೇಸರ ವ್ಯಕ್ತವಾಯಿತು.
ಜಿಲ್ಲೆಯಲ್ಲಿನ 46 ಕೇಂದ್ರಗಳಿಗೆ ಶೌಚಗೃಹ, 171 ಕೇಂದ್ರಗಳಿಗೆ ಸರ್ಮಪಕ ನೀರು ಪೂರೈಕೆ ವ್ಯವಸ್ಥೆ ಇಲ್ಲ. ಕೂಡಲೇ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.