ವಿಜಯಪುರ: ರಾಜ್ಯ ವಿಧಾನ ಸಭೆ ಚುನಾವಣೆಗೆ ಬಿರುಸಿನ ತಯಾರಿ ನಡೆದಿರುವಾಗಲೇ ಬಿಜೆಪಿ ಪಾಳಯದಲ್ಲಿ ಟಿಕೆಟ್ ವಾರ್ ಶುರುವಾಗಿದ್ದು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪಕ್ಷದ ಶಾಸಕರು ಹಾಗೂ ವರಿಷ್ಠರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ರ‌್ಯಾಲಿ, ಸಮಾವೇಶ ಎಂದೆಲ್ಲಾ ತಲ್ಲೀನರಾಗಿದ್ದು ಇನ್ನೂ ಟಿಕೆಟ್ ಅಂತಿಮಗೊಂಡಿಲ್ಲ. ಅಷ್ಟರಲ್ಲಾಗಲೇ ಸಚಿವ ಗೋವಿಂದ ಕಾರಜೋಳ ಅವರು ನಗರ ಕ್ಷೇತ್ರದ ಶಾಸಕರಿಗೆ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಹೇಳಿರುವುದು ನಿರಾಸೆ ಮೂಡಿಸಿದೆ. ಪಕ್ಷದ ಕಾರ್ಯಕರ್ತರು ಕೂಡ ನಿರಾಸೆಗೊಂಡಿದ್ದಾರೆ. ಕಾರಜೋಳ ಸಾಹೇಬ್ರು ಹಾಗೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಈ ವಿಷಯವನ್ನೇ ಕೇಳಲೆಂದು ಆಲಮಟ್ಟಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಿ.ಟಿ. ರವಿ ಅವರನ್ನು ಪ್ರಶ್ನೆ ಮಾಡಿದ್ದೇನೆ. ಆದರೆ, ಯಾರೂ ಸಹ ಇನ್ನೂ ಟಿಕೆಟ್ ಅಂತಿಮಗೊಂಡಿದೆ ಎಂದಿಲ್ಲ. ನೀವು ಪಕ್ಷ ಸಂಘಟನೆ ಮಾಡಿ ಎಂದಷ್ಟೇ ಹೇಳಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ಕಳೆದ ಬಾರಿ ಟಿಕೆಟ್ ಸಿಗದಿದ್ದರೂ ಪಕ್ಷ ಬಿಟ್ಟು ಹೋಗಲಿಲ್ಲ. ಪಕ್ಷವೇ ನನ್ನ ತಾಯಿ-ತಂದೆ. ನಾನೆಂದು ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ. ಕೆಲವರು ಅನ್ಯಕ್ಷೇತ್ರಗಳಿಗೆ ಉಸ್ತುವಾರಿ ಕೊಟ್ಟಿದ್ದರಿಂದ ಟಿಕೆಟ್ ಕೈತಪ್ಪದೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಅದು ಶುದ್ಧ ಸುಳ್ಳು. ಪ್ರಭಾವಿ ನಾಯಕರಿಗೆ ಬೇರೆ ಬೇರೆ ಕ್ಷೇತ್ರದ ಉಸ್ತುವಾರಿ ನೀಡುತ್ತಾರೆ. ಹಾಗಂತ ಟಿಕೆಟ್ ಕೈತಪ್ಪಿದೆ ಅಂತಲ್ಲ. ಯಾರೂ ಅಂಥ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಪಕ್ಷ ತೊರೆದು ಜೆಡಿಎಸ್‌ಗೆ ಹೋಗಿ ಅಲ್ಲಿ ನಮಾಜ್ ಬಿದ್ದು ಬಂದವರಿಗೆ ಟಿಕೆಟ್ ನೀಡಲಾಯಿತು. ಆಗ ನಮಾಜ್ ಬಿದ್ದವರು ಈಗ ಹಿಂದುತ್ವದ ಮಂತ್ರ ಪಠಿಸುತ್ತಿದ್ದಾರೆ. ಇವರೆಲ್ಲ ಹುಟ್ಟಿನಿಂದಲೇ ಮುಸಲ್ಮಾನರೊಂದಿಗೆ ಪಾರ್ಟ್‌ನರ್ ಆಗಿದ್ದವರು. ಅವರ ತಂದೆ ಕಾಲದಿಂದಲೇ ಟಿಪ್ಪು ಸುಲ್ತಾನ ವಂಶಜರ ಜೊತೆ ಪಾರ್ಟ್‌ನರ್ ಆಗಿದ್ದರು. ಇದೀಗ ರಾಜಕೀಯಕ್ಕಾಗಿ ‘ಸಾಬ್ರ ಮತ ಬೇಡ’ ಎನ್ನುತ್ತಿರಬಹುದು. ಆದರೆ, ನರೇಂದ್ರ ಮೋದಿ ಆಗಲಿ, ಅಟಲ್‌ಬಿಹಾರಿ ವಾಜಪೇಯಿ ಅವರಾಗಲಿ ಎಲ್ಲೂ ಮುಸ್ಲಿಂರನ್ನು ದ್ವೇಷಿಸಿಲ್ಲ ಎಂದು ಶಾಸಕ ಯತ್ನಾಳ ವಿರುದ್ಧ ಹರಿಹಾಯ್ದರು.
ಯತ್ನಾಳಗಿಂತ ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಮಾತಿಗೆ ಬದ್ದನಾಗಿದ್ದೇನೆ. ಅವರಂತೆ ಪಾರ್ಟಿ ಬಿಟ್ಟು ಹೋಗಿದ್ದೇನಾ? ಬೇರೆ ಪಕ್ಷಕ್ಕೆ ಹೋದಾಗ ಸಾಬ್ರಗಿ ಬೈಯ್ಯೋದು....ಬಿಜೆಪಿಗೆ ಬಂದಾಗ ಹಿಂದುತ್ವ ಮಂತ್ರ ಜಪಿಸುವುದು ನನ್ನ ಜಾಯಮಾನವಲ್ಲ. ಅಧಿಕಾರಕ್ಕಾಗಿ ನಾನು ಬಿಜೆಪಿಗೆ ಬಂದಿದ್ದರೆ ಅಧಿಕಾರ ಸಿಗದೇ ಇದ್ದಾಗ ಪಕ್ಷ ಬಿಡಬೇಕಾಗಿತ್ತಲ್ಲ? ಟಿಕೆಟ್ ಸಿಗದೇ ಹೋದರೂ, ಪಕ್ಷದ ಯಾವುದೇ ಸ್ಥಾನಮಾನ ಸಿಗದೇ ಹೋದರೂ ಖುಷಿಯಿಂದ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ಪಕ್ಷದ ವರಿಷ್ಠರು ಟಿಕೆಟ್ ಹಂಚಿಕೆ ಸಮಯದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯತ್ನಾಳರ ಜೊತೆಗೆ ಯಾವುದೇ ಕಾಂಪ್ರಮೈಸ ಇಲ್ಲ. ಅಂಥ ಪ್ರಸ್ತಾವನೆಯೂ ನಮ್ಮಮುಂದಿಲ್ಲ. ಟಿಕೆಟ್ ಸಿಗದೇ ಹೋದರೆ ನನ್ನ ಬೆಂಬಲಿಗರು, ಹಿತೈಷಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಟಿಕೆಟ್ ಕೇಳುವ ಸಂದರ್ಭದಲ್ಲಿ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಹೇಳುವುದು ತಪ್ಪಾಗುತ್ತದೆ.ಈ ಹಿಂದೆ ಟಿಕೆಟ್ ಕೊಡದೇ ಇದ್ದಾಗಲೂ ಪಕ್ಷೇತರ ನಿಂತಿಲ್ಲ. ಈಗಲೂ ನನಗೆ ಪಕ್ಷದಿಂದ ಹೊರಹೋಗುವ ಇಚ್ಛೆ ಇಲ್ಲ. ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೇನೆ ಎಂದು ಪಟ್ಟಣಶೆಟ್ಟಿ ತಿಳಿಸಿದರು.
ಇನ್ನು ನಗರ ಶಾಸಕರು ಕೆಲವೊಂದು ಸಮುದಾಯಗಳ ಬಗ್ಗೆ ಟೀಕೆ ಮಾಡಿರುವುದು ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುವುದು ಸಹಜ. ಕೆಲವೊಂದು ಸಮಾಜಗಳು ಅಸಮಾಧಾನಗೊಂಡಿವೆ. ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ. ಮುರುಗೇಶ ನಿರಾಣಿ ಹಾಗೂ ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರ ಮಗ ನನಗೆ ನಿಲ್ಲಿಸಿ ಗೆಲ್ಲುವ ವಿಚಾರದಲ್ಲಿ ಇದ್ದಾರೆ ವಿನಃ ಯಾರನ್ನೂ ದ್ವೇಷಿಸಲು ಅಲ್ಲ. ಪಕ್ಷಕ್ಕೆ ಸದಾ ಅವರ ಬೆಂಬಲ ಇದ್ದೇ ಇರಲಿದೆ. ಅವರೆಲ್ಲ ನನಗೆ ಆತ್ಮೀಯರು. ವೈಯಕ್ತಿಕ ಸಂಬಂಧಗಳೂ ಇವೆ. ಹೀಗಾಗಿ ನಾನು ಅಭ್ಯರ್ಥಿ ಆದರೆ ನನ್ನನ್ನು ಗೆಲ್ಲಿಸಲು ಹೆಚ್ಚಿನ ಪ್ರಯತ್ನ ಮಾಡುವ ವಿಶ್ವಾಸ ಇದೆ ಎಂದರು.
ಅಕ್ರಮ ಆಸ್ತಿ ಮಾಡಿದ್ದಾರೆನ್ನುವುದು, ಅಲ್ಪಸಂಖ್ಯಾತರ ಹೆಸರಲ್ಲಿ ಆಸ್ತಿ ಮಾಡಿದ್ದು ಅವರು ಸತ್ತು ಹೋಗಿದ್ದಾರೆನ್ನುವುದು ವೃಥಾ ಆರೋಪಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಹಾಗಿದ್ದರೆ ಸಾಬೀತುಪಡಿಸಲಿ. ಮಾನ, ಮರ್ಯಾದೆ, ನಾಚಿಕೆ ಬಿಟ್ಟು ರಾಜಕಾರಣ ಮಾಡಬಾರದು. ಒಮ್ಮೆ ಯಡಿಯೂರಪ್ಪ ಗೆ ಬೈಯ್ಯೋದು ಮತ್ತೆ ಹೊಗಳೋದು....ಮೋದಿಗೆ ಬೈಯ್ಯೋದು ಹೊಗಳೋದು....ಇದೆಲ್ಲ ಮೂರು ಬಿಟ್ಟವರ ಕೆಲಸ. ಮನುಷ್ಯತ್ವ ಕೂಡ ಬೇಕಲ್ಲ? ಎಂದು ಯತ್ನಾಳ ವಿಚಾರದಲ್ಲಿ ಸುದ್ದಿಗಾರರ ಸಾಲು ಸಾಲು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ರಾಜ್ಯ ವಿಧಾನ ಸಭೆ ಚುನಾವಣೆಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ತಯಾರಿ ನಡೆಸಿದ್ದು, ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ. ಗ್ಯಾರಂಟಿ ಕಾರ್ಡ್ ಸಿಕ್ಕ ಮಾತ್ರಕ್ಕೆ ಜನರ ಬೇಡಿಕೆ ಈಡೇರಲ್ಲ. ಹೀಗಾಗಿ ಯಾವುದೇ ಅಪ ಪ್ರಚಾರಕ್ಕೆ ಅವಕಾಶ ಕೊಡಬಾರದು ಎಂದರು. ಸಿದ್ದು ಮಲ್ಲಿಕಾರ್ಜುನಮಠ ಇದ್ದರು.