ತುಮಕೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಂಗವಿಕಲರಿಗೆ ಎಲ್ಲ ಇಲಾಖೆಗಳಲ್ಲಿ ಶೇ.5 ಅನುದಾನ ಮೀಸಲಾತಿ ನೀಡಿದರಾದರೂ ಅಂಗವಿಕಲರ ಕಲ್ಯಾಣಕ್ಕೆ ಪೂರಕವಾಗಿ ಕ್ರಿಯಾಯೋಜನೆ ರೂಪಿಸದೆ ಬಂಡವಾಳಶಾಹಿ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವುದನ್ನು ಖಂಡಿಸಿ ತುಮಕೂರು ನಗರ ಅಂಗವಿಕಲ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅನುದಾನ ಬಂಡವಾಳಶಾಹಿ ಯೋಜನೆಗಳ ಪಾಲಾಗುತ್ತಿದ್ದು ಅರ್ಹರಿಗೆ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಅಂಗವಿಕಲರ ಒಕ್ಕೂಟದ ಅಧ್ಯಕ್ಷೆ ಟಿ.ಎನ್.ಮಂಜುಳಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮಂಜುಳಾ, ಅರ್ಹ ಅಂಗವಿಕಲರು ಯಾವುದೇ ಯೋಜನೆಯ ಫಲವನ್ನು ಪಡೆಯಬೇಕಾದರೆ ಮಧ್ಯವರ್ತಿಗಳ ಮೊರೆ ಹೋಗಬೇಕಿದೆ. ದಲ್ಲಾಳಿಗಳಿಗೆ ಹಣ ನೀಡುವ ಮೂಲಕ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಿದೆ. ನೇರವಾಗಿ ಇಲಾಖಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅನಾವಶ್ಯಕವಾಗಿ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.
ಅಂಗವಿಕಲರನ್ನು ಕೇವಲ ಫಲಾನುಭವಿಗಳಂತೆ ನೋಡುತ್ತಿದ್ದಾರೆಯೆ ಹೊರತು ಅವರನ್ನು ಮನುಷ್ಯರಾಗಿ ಕಾಣುತ್ತಿಲ್ಲ. ಹಾಗಾಗಿ, ಅಂಗವಿಕಲರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದು ಸವಾಲಾಗುತ್ತಿವೆ ಹೊರತು ಪರಿಹಾರ ಸಿಗುತ್ತಿಲ್ಲ. ವರ್ಷದ ಕೊನೆಯಲ್ಲಿ ತರಾತುರಿಯಾಗಿ ಅನರ್ಹರಿಗೆ ಸೌಲಭ್ಯವನ್ನು ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ನಗರ ಅಂಗವಿಕಲರ ಒಕ್ಕೂಟದ ಗಂಗರಾಜು, ವೀಣಾ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಡಿಸಿಗೆ ಮನವಿ ಸಲ್ಲಿಕೆ: ಮಾಸಾಶನ ಮಂಜೂರಾತಿಯಲ್ಲಿ ಆಗುತ್ತಿರುವ ವಿಳಂಬ ಧೋರಣೆ ನಿಲ್ಲಿಸಬೇಕು. ಯುಆರ್ ಡಬ್ಲ್ಯೂಗಳ ಬಾಕಿ ಉಳಿಸಿಕೊಂಡ 8 ತಿಂಗಳ ಗೌರವಧನವನ್ನು ತ್ವರಿತವಾಗಿ ನೀಡಬೇಕು. ಪ್ರತೀ 3 ತಿಂಗಳಿಗೊಮ್ಮೆ ಅಂಗವಿಕಲರ ಕುಂದು ಕೊರತೆ ಸಭೆಯನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ಗೆ ಮನವಿ ಮಾಡಿದರು. ಅಂಗವಿಕರಲ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಈ ಎಲ್ಲ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳನ್ನು ಒಟ್ಟಿಗೆ ಸಭೆ ಸೇರಿಸುತ್ತೇವೆ. ಆ ಸಭೆಗೆ ತಮ್ಮನ್ನು ಆಹ್ವಾನಿಸಿ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.