ಜಿಲ್ಲೆ

ಕಾರ್ಯಕರ್ತರ ಸೇವೆ ಖಾಯಂಗೊಳಿಸಲು ಒತ್ತಾಯ: ಮಂಡ್ಯ ಡಿಸಿ ಕಚೇರಿ ಎದುರು ಅಂಗವಿಕಲರಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಹದಿನೈದು ವರ್ಷದಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರ ಸೇವೆಯನ್ನು ವಿಶೇಷ ನಿಯಮಾವಳಿ ರಚಿಸಿ ಖಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಬಳಿ ಜಮಾಯಿಸಿದ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರು, ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಾರ್ಯಕರ್ತರು ನಿವೃತ್ತಿ ವೇಳೆ ಇಡಿಗಂಟು ನೀಡಬೇಕು. ಮಹಿಳಾ ಕಾರ್ಯಕರ್ತರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಗ್ರಾಮೀಣ ಪುನರ್ವಸತಿ ಯೋಜನೆ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಹೊಸ ತಾಲೂಕು ಮತ್ತು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗೆ ಕಾರ್ಯಕರ್ತರನ್ನು ನೇಮಿಸಬೇಕು. ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯ ಮತ್ತು ಅಭಿವೃದ್ಧಿ ನಿಗಮ ತೆರೆಯಬೇಕು. ಕಾರ್ಯಕರ್ತರು ಮೃತಪಟ್ಟಲ್ಲಿ ನೀಡಲಾಗುತ್ತಿರುವ ಮರಣ ಪರಿಹಾರ ಧನವನ್ನ 30 ಲಕ್ಷ ರೂಗೆ ಹೆಚ್ಚಿಸಬೇಕು. ಅಂಗವಿಕಲರಿಗೆ ರಾಜ್ಯಾದ್ಯಂತ ಸರ್ಕಾರಿ ನಿಗಮದ ಬಸ್‌ಗಳಲ್ಲಿ ಸಂಚರಿಸಲು ಉಚಿತ ಬಸ್‌ಪಾಸ್ ನೀಡಬೇಕು. ಪ್ರತಿ ಜಿಲ್ಲೆಗೆ ಅಂಗವಿಕಲರನ್ನೇ ಸಂಯೋಜಕರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಅಂತೆಯೇ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಲತಾಕುಮಾರಿ ವರ್ಗಾವಣೆ ಆದೇಶ ರದ್ದುಪಡಿಸಬೇಕು. ಇಲಾಖೆಯಲ್ಲಿ ಅಂಗವಿಕಲರ ಕಲ್ಯಾಣ ಯೋಜನೆಗಳು ಸ್ವಯಂಸೇವಾ ಸಂಸ್ಥೆ ಮೂಲಕ ಜಾರಿಯಾಗುತ್ತಿದ್ದವು. ಅದನ್ನು ತಡೆಗಟ್ಟಿದ ನಿರ್ದೇಶಕಿ ಲತಾಕುಮಾರಿ ಸ್ವಯಂಸೇವಾ ಸಂಸ್ಥೆಗಳ ಹಗಲು ದರೋಡೆಗೆ ಕಡಿವಾಣ ಹಾಕಿ ಯೋಜನೆಗಳನ್ನು ಆನ್‌ಲೈನ್ ಮೂಲಕ ಜಾರಿಗೆ ಕ್ರಮ ವಹಿಸಿದ್ದಾರೆ. ಅಲ್ಲದೆ ಪಾರದರ್ಶಕ ಆಡಳಿತಕ್ಕೆ ಮುಂದಾಗಿರುವುದು ಹಲವರ ಕಣ್ಣು ಕೆಂಪಾಗಿಸಿದೆ. ಹಾಗಾಗಿ ಪಟ್ಟಭದ್ರರು ಲಾಭಿ ನಡೆಸಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಗಾವಣೆ ಆದೇಶ ರದ್ದು ಮಾಡಿ ಸದರಿ ಇಲಾಖೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಎಸ್.ಮಹದೇವಪ್ಪ, ರಾಜ್ಯ ಸಂಚಾಲಕ ಜೆ.ದೇವರಾಜು, ಜಿಲ್ಲಾ ಗೌರವಾಧ್ಯಕ್ಷ ಎಂ.ಎಚ್.ಗಿರಿಗೌಡ, ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ಕೃಷ್ಣ, ಬೋರೇಗೌಡ, ಎಚ್.ಟಿ.ಲಕ್ಷ್ಮಮ್ಮ, ಎಚ್.ಎನ್.ಸೋಮಶೇಖರ್, ಧನಲಕ್ಷ್ಮೀ, ಕೃಷ್ಣ, ಮಹದೇವ, ಕೃಷ್ಣಮೂರ್ತಿ, ಲಿಂಗರಾಜು, ದೇವರಾಜು, ಟಿ.ಸಿ.ಶಿವಲಿಂಗಯ್ಯ ಇತರರಿದ್ದರು.