ಭಟ್ಕಳ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಅಂಗವಿಕಲ ಸಹೋದರ ಮತ್ತು ಸಹೋದರಿಯನ್ನು ವ್ಹೀಲ್‌ಚೇರ್ ಮೇಲೆ ಹೊತ್ತುಕೊಂಡು ಮೊದಲ ಮಹಡಿಗೆ ಸಾಗಿಸಿದ ಘಟನೆ ಸೋಮವಾರ ನಡೆದಿದ್ದು, ವಿದ್ಯುತ್ ಸ್ಥಗಿತಗೊಂಡಾಗ ಪರ್ಯಾಯ ವ್ಯವಸ್ಥೆ ಕಲ್ಪಿಸದ ತಾಲೂಕು ಆಡಳಿತದ ವಿರುದ್ಧದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಣಾರ ಗ್ರಾಮದ ಗಾಳಿಕಟ್ಟೆಯಿಂದ ಭಟ್ಕಳ ಉಪನೋಂದಣಾಧಿಕಾರಿ ಕಚೇರಿಗೆ ಅಂಗವಿಕಲ ಸಹೋದರ ಮತ್ತು ಸಹೋದರಿ ಆಗಮಿಸಿದ್ದರು. ಉಪನೋಂದಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧದ ಮೊದಲ ಮಹಡಿಯಲ್ಲಿದೆ.
ಸೋಮವಾರ ಬೆಳಗ್ಗೆಯಿಂದಲೇ ವಿದ್ಯುತ್ ಕೈಕೊಟ್ಟಿದ್ದರಿಂದ ಲ್‌ಟಿ ಬಂದಾಗಿತ್ತು. ಪರ್ಯಾಯವಾಗಿ ಆಡಳಿತ ಸೌಧದಲ್ಲಿ ಜನರೇಟರ್ ಇಲ್ಲ. ಇದರಿಂದ ವ್ಹೀಲ್‌ಚೇರ್‌ನಲ್ಲಿ ಬಂದ ಇಬ್ಬರನ್ನು ಅವರ ಸಂಬಂಧಿಕರು ಮೊದಲ ಮಹಡಿಗೆ ಹೊತ್ತುಕೊಂಡು ಹೋಗಿದ್ದಾರೆ. ಹೀಗೆ, ಸಾಗಿಸುವಾಗ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಕೂಡಲೇ ತಾಲೂಕು ಆಡಳಿತ ಸೌಧದಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.