ಬೇಲೂರು: ಅಂಗವಿಕಲ ಮಕ್ಕಳು ಸಾಧನೆ ಮಾಡುವುದಿಲ್ಲ ಎಂಬ ಆತಂಕ ಬೇಡ, ಅವರು ಹೆಚ್ಚಿನ ದೈಹಿಕ ಸಾಮರ್ಥ್ಯ ಹೊಂದಲು ಪಾಲಕರು ಸಹಕರಿಸಿದರೆ ಉತ್ತಮ ಸಾಧನೆ ಮಾಡಿ ತೋರಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಕಲ್ಯಾಣ ಮಂಟಪದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಕ್ರೀಡೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳು ಸಾಧನೆ ಮಾಡುವುದಿಲ್ಲ ಎಂಬ ಆತಂಕ ಪಾಲಕರಲ್ಲಿ ಇಟ್ಟುಕೊಳ್ಳಬಾರದು. ಈ ಮಕ್ಕಳು ದೈಹಿಕ ಅಂಗವಿಕಲರಾಗಿದ್ದರೂ ಮಾನಸಿಕವಾಗಿ ತಮ್ಮದೇ ಆದ ಸಾಮರ್ಥ್ಯ ಹೊಂದಿರುತ್ತಾರೆ. ಅವರೊಂದಿಗೆ ಸಾಮರಸ್ಯದ ಬದುಕು ಸಾಗಿಸಬೇಕು. ಅಂಗವಿಕಲ ಮಕ್ಕಳ ಜನನಕ್ಕೆ ತಾಯಂದಿರಲ್ಲಿನ ಅನೇಕ ಸಮಸ್ಯೆಗಳು ಕಾರಣ. 18 ವರ್ಷ ತುಂಬದೇ ಹಾಗೂ 40 ವರ್ಷ ನಂತರ ಮಕ್ಕಳನ್ನು ಪಡೆಯುವುದು, ಮಾನಸಿಕವಾಗಿ ಖಿತನ್ನತೆಗೆ ಒಳಗಾಗುವುದು ಅಂಗವಿಕಲ ಮಕ್ಕಳ ಜನನಕ್ಕೆ ಕಾರಣವಾಗಲಿದ್ದು, ಪೋಷಕರು ವೈದ್ಯರಲ್ಲಿ ಸಲಹೆ ಪಡೆಯಬೇಕೆಂದರು.
ಸಾಹಿತಿ ಇಂದ್ರಮ್ಮ ಶ್ರೀ ಚನ್ನಕೇಶವಸ್ವಾಮಿ ದೇಗುಲ ಹಾಗೂ ಹೊಯ್ಸಳ ಸಾಮ್ರಾಜ್ಯ ಕುರಿತು ಮಾತನಾಡಿ, ಮಕ್ಕಳು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಶಿಲ್ಪಗಳಿಗೆ ಹಾನಿ ಮಾಡಬಾರದು, ಅಂಗವಿಕಲ ಮಕ್ಕಳಲ್ಲಿ ಒಮ್ಮತ ಇರಬೇಕೆಂದು ಆಶಯ ವ್ಯಕ್ತಪಡಿಸಿದರು.
ಬಿಆರ್‌ಸಿ ಶಿವಮರಿಯಪ್ಪ, ವೈದ್ಯೆ ಜಾನ್ಹವಿ, ಬಿಐಆರ್‌ಟಿ ತಿಮ್ಮೇಶ್, ನವೀನ್ ಕುಮಾರ್, ಪಾಲಕರು ಮತ್ತು ವಿದ್ಯಾರ್ಥಿಗಳಿದ್ದರು.