ಜಿಲ್ಲೆ

ಅಂಗವಿಕಲರೊಂದಿಗೆ ಗೌರವಯುತವಾಗಿ ವರ್ತಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸರ್ಕಾರಿ ಕಚೇರಿಗೆ ಬರುವ ಅಂಗವಿಕಲರೊಂದಿಗೆ ಗೌರವದಿಂದ ವರ್ತಿಸಿ. ಜತೆಗೆ ಆಧ್ಯತೆಯೊಂದಿಗೆ ಅವರ ಕೆಲಸ ಕಾರ್ಯವನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂಗವಿಕಲರ ಕುಂದು ಕೊರತೆ ಪರೀಶೀಲನಾ ಸಭೆ ಮತ್ತು ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮ ನಡೆಸುವುದು ಅಗತ್ಯ ಎಂದರು.

ಸುಮಾರು 14 ಕಂಪನಿ ಅಂಗವಿಕಲರು ಮೀಸಲಿರುವ ಉದ್ಯೋಗಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ನೀಡುತ್ತಿದ್ದಾರೆ. ಈಗಾಗಲೇ 300ಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದಾರೆ. ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲ ಅಂಗವಿಕಲರು ಪಡೆದುಕೊಳ್ಳಿ. ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಅಂಗವಿಕಲರಿಗೆ ಅನುಕಂಪ ತೋರಿಸದೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಅಂಗವಿಕಲರಿಗೆ ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಸಹ ದೇವರು ಅವರಿಗೆ ವಿಶೇಷ ಚೈತನ್ಯವನ್ನು ನೀಡಿ ಕಳಿಸಿದ್ದಾನೆ. ಅವರ ಚೈತನ್ಯವನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಅವರಿಗೆ ಅವಕಾಶ ನೀಡುವುದು ಅತಿಮುಖ್ಯ. ಅಂಗವಿಕಲರ ಕೊರತೆಯನ್ನು ಆಲಿಸಿದ ಡಿಸಿ, ಅಧಿಕಾರಿಗಳಿಗೆ ಅಂಗವಿಕಲರ ಅಹವಾಲುಗಳನ್ನು ಕಾನೂನಾತ್ಮಕವಾಗಲ್ಲದೆ ಮಾನವಿಯತೆ ದೃಷ್ಟಿಯಿಂದ ನೋಡಿ ಹಾಗೂ ಅವರೆಲ್ಲರ ಕುಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ಅಂಗವಿಕಲರಿಗೆ ಕರುಣೆ ತೊರುವುದನ್ನು ನಿಲ್ಲಿಸಿ. ಬದಲಿಗೆ ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಹೆಚ್ಚು ಅವಕಾಶಗಳನ್ನು ನೀಡಿ. ಅಂಗವೈಕಲ್ಯ ಹೊಂದಿದ್ದರು ಸಹ ಅನೇಕರು ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಾತ್ರವಲ್ಲದೆ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅಂತವರು ಪ್ರೇರಣೆಯಾಗಿ ತೆಗೆದುಕೊಂಡು ನೀವು ಬದುಕಿನಲ್ಲಿ ಸಾಧನೆ ಮಾಡಿ. ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಇತರರಿದ್ದರು. ಇದೇ ವೇಳೆ ಕೆಲವರಿಗೆ ಸಾಂಕೇತಿಕವಾಗಿ ಶ್ರವಣದೋಷ ಯಂತ್ರ ವಿತರಿಸಲಾಯಿತು.