ಬೆಂಗಳೂರು ಗ್ರಾಮಾಂತರ: ಅಂಗವಿಕಲರಿಗೆ ರಕ್ಷಣೆ ಒದಗಿಸುವ ಸಲುವಾಗಿ ಸಂವಿಧಾನದಲ್ಲಿ ವಿಶೇಷ ಕಾಯ್ದೆ ಜಾರಿಗೆ ತಂದಿದ್ದು, ವಿಕಲಾಂಗರು ಕಾಯ್ದೆಗಳು ಹಾಗೂ ಇಲಾಖೆ ಸೌಲಭ್ಯಗಳ ಪ್ರಯೋಜನ ಪಡೆಯುವ ಮೂಲಕ ಸಮಾಜದಲ್ಲಿ ಸಬಲರಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಆರ್.ನಟೇಶ್ ತಿಳಿಸಿದರು.
ಗ್ರಾಮಾಂತರ ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.
ಯಾರೂ ಹೀಗೆಯೇ ಹುಟ್ಟಬೇಕೆಂದು ನಿರ್ಧರಿಸಿ ಜನ್ಮ ಪಡೆಯುವುದಿಲ್ಲ. ಹಲವು ಕಾರಣಗಳಿಂದ ನ್ಯೂನತೆ ಉಂಟಾಗಿರುವ ಬಗ್ಗೆ ಬೇಸರಿಸಿದೆ ಅದನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.
ಸಂವಿಧಾನದ 14 ಮತ್ತು 15ನೇ ವಿಧಿಗಳು ಅಂಗವಿಕಲರಿಗೆ ರಕ್ಷಣೆ ನೀಡುತ್ತವೆ. ಈ ವಿಶೇಷ ಕಾಯ್ದೆಯನ್ನು 2016ರಲ್ಲಿ ಜಾರಿಗೆ ತರಲಾಗಿದ್ದು, ಆಸಿಡ್ ದಾಳಿಗೆ ಸಿಲುಕಿದವರನ್ನು ಈ ಕಾಯ್ದೆಯಡಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಕಲಾಂಗರ ನ್ಯೂನತೆಯನ್ನು ಗುರಿಯಾಗಿಸಿ ಅವಮಾನಿಸಿದ್ದಲ್ಲಿ ಅಂತಹರ ವಿರುದ್ಧ ತಹಸೀಲ್ದಾರ್ ಅಥವಾ ಪೊಲೀಸರಿಗೆ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ 6 ತಿಂಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ ಮಾತನಾಡಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ 1992ರಿಂದ ಪ್ರತಿ ವರ್ಷ ವಿಶ್ವ ಅಂಗವಿಕಲರ ದಿನ ಆಚರಿಸಲಾಗುತ್ತಿದ್ದು, ಒಬ್ಬಂಟಿ ಎಂದು ಕೊರಗಬೇಡಿ, ಇಡೀ ವಿಶ್ವವೇ ನಿಮ್ಮ ಜತೆ ಇದೆ ಎಂದರು.
ಅಂಗವಿಕಲರಿಗೆ ಕೇಂದ್ರ, ರಾಜ್ಯ, ಸ್ಥಳೀಯ ಸರ್ಕಾರಗಳು ವಿವಿಧ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಬಳಸಿಕೊಳ್ಳುವ ಜತೆಗೆ ಸಾಧಿಸುವ ಛಲ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ಶೀಘ್ರವೇ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಜಿಲ್ಲಾಡಳಿತ ಭವನದಲ್ಲಿ ಅಂಗವಿಕಲ ಸ್ನೇಹಿ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮಾತನಾಡಿ, ಸಾಧನೆಗೆ ಯಾವುದೇ ನ್ಯೂನತೆ ಅಡ್ಡ ಬರುವುದಿಲ್ಲ, ಮನಸ್ಸು ಹಿಡಿತದಲ್ಲಿದ್ದು, ದೂರದೃಷ್ಟಿ ಮತ್ತು ಒಳ್ಳೆಯ ಆಲೋಚನೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದರು.
ಅಂಗವಿಕಲರನ್ನು ಸ್ವಾವಲಂಬಿಯಾಗಿಸಿ, ಸಮಾಜದ ಮುಖ್ಯವಾಹಿನಿಗೆ ತರುವುದು ಕಾರ್ಯಕ್ರಮದ ಉದ್ದೇಶ. ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲಾಖೆಯೂ ಎಲ್ಲ ಬಗೆಯ ನೆರವಿಗೆ ಸಿದ್ಧವಿದೆ. ಜಗದೀಶ್ ಜಿಲ್ಲಾ ಅಂಗವಿಕಲ ಇಲಾಖೆ ಕಲ್ಯಾಣಾಧಿಕಾರಿ
ವಿಜೇತರಿಗೆ ಬಹುಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿಕಲಾಂಗರನ್ನು ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು. ತಾಲೂಕು ನೋಡಲ್ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.