ಚಿತ್ರದುರ್ಗ: ಕೇಂದ್ರ ಸರ್ಕಾರ ಅಂಗವಿಕಲರ ಸಬಲೀಕರಣಕ್ಕೆ ಆದ್ಯತೆ ನೀಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಸಾಮಾಜಿಕ ಅಧಿಕಾರಿತಾ ಶಿಬಿರ-ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಸಾಧನ ಸಲಕರಣೆಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 9 ವರ್ಷದಲ್ಲಿ ದೇಶದ ವಿವಿಧೆಡೆ 14,174 ಮೌಲ್ಯಮಾಪನ ಶಿಬಿರ ನಡೆಸಿ, 26 ಲಕ್ಷಕ್ಕೂ ಅಧಿಕ ಮಂದಿಗೆ ಅಂತರಾಷ್ಟ್ರೀಯ ಗುಣಮಟ್ಟದ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಾಗಿದೆ ಎಂದರು.
ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಬದುಕಲಿ ಎಂಬ ದೃಷ್ಟಿಯಿಂದ ಶಸ್ತ್ರಚಿಕಿತ್ಸೆ, ಸ್ಕಾಲರ್‌ಶಿಪ್, ಸಾಧನ-ಸಲಕರಣೆ, ಕೌಶಲ ತರಬೇತಿ, ಸಾಲ ಸೌಲಭ್ಯ ಒಳಗೊಂಡು ಇತರ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಯಾವ ದೇವರ ಶಾಪದಿಂದಲೂ ಅಂಗವಿಕಲರಾಗಿ ಜನಿಸುವುದಿಲ್ಲ. ಪಾಲಕರ ಕೆಲ ಸಣ್ಣ-ಪುಟ್ಟ ತಪ್ಪುಗಳಿಂದ, ಕೆಲವೊಮ್ಮೆ ವೈದ್ಯರ ನಿರ್ಲಕ್ಷೃದಿಂದಾಗಿ ಅಂಗವಿಕಲತೆ ಉಂಟಾಗುತ್ತದೆ. ಅದಕ್ಕೆ ತ್ವರಿತವಾಗಿ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಜಾರಿಗೊಳಿಸಿದ ವಿಶ್ವಕರ್ಮ ದೇಶದಲ್ಲೇ ಅತ್ಯುತ್ತಮ ಯೋಜನೆ. ಕುಲಕಸುಬುಗಳಲ್ಲಿ ತೊಡಗುವವರು ಗ್ರಾಪಂನಿಂದ ದೃಢೀಕರಣ ಪತ್ರ ಪಡೆದು, ಜಿಲ್ಲಾಡಳಿತ ಫಲಾನುಭವಿ ಗುರುತಿಸಿದರೆ, 5 ದಿನದ ಕೌಶಲ ತರಬೇತಿ ನೀಡುವುದರ ಜತೆಗೆ ಆರ್ಥಿಕವಾಗಿ ಒಂದಿಷ್ಟು ನೆರವು ನೀಡಲಾಗುವುದು ಎಂದರು.
ಕೇಂದ್ರ ಇಲಾಖೆ ಜಂಟಿ ಕಾರ್ಯದರ್ಶಿ ರಾಜೀವ್ ಶರ್ಮಾ ಮಾತನಾಡಿ, ಅಂಗವಿಕಲರ ಕುರಿತು ಪ್ರಧಾನಿ ಅವರು ವಿಶೇಷ ಕಾಳಜಿ ಹೊಂದಿದ್ದಾರೆ. ಅನೇಕ ಯೋಜನೆ ಜಾರಿಗೊಳಿಸಿ, ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಎಲ್ಲರಂತೆ ಸುಗಮ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದು, ಈ ಮಹತ್ವಪೂರ್ಣ ಯೋಜನೆಯ ಲಾಭ ರಾಷ್ಟ್ರಾದ್ಯಂತ ಹಲವರು ಪಡೆದಿದ್ದಾರೆ ಎಂದು ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಅಂಗವಿಕಲರ ಕಲ್ಯಾಣ ಇಲಾಖೆ, ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ), ಜಿಲ್ಲಾಡಳಿತ, ಜಿಪಂ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.