ಕೊಳ್ಳೇಗಾಲ: ಅಂಗವಿಕಲತೆ ಶಾಪವಲ್ಲ, ಅದೊಂದು ಆಕಸ್ಮಿಕ ಹುಟ್ಟು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಬಿಇಒ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮಗ್ರ ಶಿಕ್ಷಣ ಕರ್ನಾಟಕ, ಕೊಳ್ಳೇಗಾಲ ವಲಯ ಹಾಗೂ ಅಲಿಂಕೊ ಸಂಸ್ಥೆ ಸಹಯೋಗದಲ್ಲಿ ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕಿನ ಅಂಕವಿಕಲ ಮಕ್ಕಳಿಗಾಗಿ ಆಯೋಜಿಸಿದ್ದ ವ್ಯೆದ್ಯಕೀಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗವಿಕಲ ಮಕ್ಕಳು ಎಲ್ಲರಂತೆ ಜೀವನ ನಡೆಸಲು ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಸಾಧನೆ ಮಾಡಲು ಹಲವು ಅವಕಾಶಗಳನ್ನು ಸೃಷ್ಟಿಸಿದೆ ಎಂದರು.
ಅಲಿಂಕೋ ಸಂಸ್ಥೆ ವತಿಯಿಂದ ಆರೋಗ್ಯ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದಲ್ಲಿ ದೈಹಿಕ ನ್ಯೂನತೆ, ಪೂರ್ಣದೃಷ್ಟಿ ದೋಷ, ಶ್ರವಣದೋಷ, ಬೌದ್ಧಿಕ ನ್ಯೂನತೆ, ಬಹುವಿಕಲತೆ, ಸೆರೆಬ್ರಲ್ ಪಾಲ್ಸಿಯಿಂದ ಭಾಗವಹಿಸಲಿದ್ದಾರೆ. ವ್ಯೆದ್ಯ ಸಿಬ್ಬಂದಿ ಅವರನ್ನು ತಪಾಸಣೆಗೆ ಒಳಪಡಿಸಿ ನಂತರ ಅಗತ್ಯ ಸಲಕರಣೆ ಒದಗಿಸಲಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಗಡಿ ಹಾಗೂ ತಾಲೂಕು ವ್ಯೆದ್ಯಾಧಿಕಾರಿ ಡಾ.ಗೋಪಾಲ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಬಿಇಒ ಮಂಜುಳಾ, ಬಿಆರ್‌ಸಿ ಮಹದೇವ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಪೂರ್ಣಚಂದ್ರ ವಿಕಲಚೇತನ ಸಂಘದ ಅಧ್ಯಕ್ಷ ಸಿದ್ದರಾಜು, ಡಾ.ಸುನೀತಾ, ಡಾ.ರಾಜು ಇತರರು ಇದ್ದರು.