ಜಿಲ್ಲೆ

ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!

ಮೈಸೂರು: ಕನ್ನಡ ಚಿತ್ರರಂಗ ಎಂದಾಕ್ಷಣ ಅದರಲ್ಲೂ ನಿರ್ದೇಶನದ ವಿಚಾರ ಬಂದಾಗ ಮೊದಲು ನೆನಪಾಗುವ ಹೆಸರೇ ಪುಟ್ಟಣ್ಣ ಕಣಗಾಲ್ ಅವರದ್ದು.

ಚಂದನವನದ ಅಪ್ರತಿಮ ನಿರ್ದೇಶಕರಾಗಿದ್ದ ಅವರು ಅದ್ಭುತ ಎನಿಸುವಂಥ ಸಿನಿಮಾಗಳನ್ನಷ್ಟೇ ಕೊಟ್ಟಿಲ್ಲ, ಜೊತೆಗೆ ಮರೆಯಲಾಗದ ಮಾಣಿಕ್ಯದಂಥ ಅದ್ಭುತ ಕಲಾವಿದರನ್ನೂ ಕೊಟ್ಟಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್​ ಸ್ಟಾರ್ ಅಂಬರೀಷ್​ ಮುಂತಾದ ಘಟಾನುಘಟಿಗಳೆಲ್ಲ ಅವರು ಪರಿಚಯಿಸಿದ್ದ ಕಲಾವಿದರೇ.

ಆದರೆ ಅಂಥ ಧೀಮಂತ ನಿರ್ದೇಶಕರ ಮನೆ ಇಂದು ತೀರಾ ದುಸ್ಥಿತಿಯಲ್ಲಿದೆ. ಶಿಥಿಲಗೊಂಡಿರುವ ಈ ಮನೆ ಯಾವಾಗ ಬೇಕಿದ್ದರೂ ಬಿದ್ದು ನೆಲಸಮವಾಗಬಹುದು ಎಂಬಂತಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಇರುವ ಈ ಮನೆಯ ಚಿತ್ರಗಳನ್ನು ಪವನ್ ಕುಮಾರ್ ಎಂಬ ಟೆಕ್ಕಿಯೊಬ್ಬರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಈ ಕುರಿತು ತಕ್ಷಣದ ಕ್ರಮ ಅಗತ್ಯವಿದೆ ಎಂದು ಹೇಳಿಕೊಳ್ಳುವ ಮೂಲಕ ಕಾಳಜಿ ತೋರಿದ್ದಾರೆ.