ಚನ್ನಗಿರಿ: ರೈತರು ಸಮಗ್ರ ಕೃಷಿ ಪದ್ಧತಿ, ಸಣ್ಣ ಪ್ರಮಾಣದ ಹೈನುಗಾರಿಕೆ, ಎರೆಹುಳು ತಯಾರಿಕೆ ಮತ್ತು ಹಸಿರೆಲೆ ಗೊಬ್ಬರ ಬಳಕೆ ಮೂಲಕ ಭೂ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಶಿವಮೊಗ್ಗ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಕೆ.ಟಿ. ಗುರುಮೂರ್ತಿ ತಿಳಿಸಿದರು.
ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಿಸ್ತರಣಾ ಶಿಕ್ಷಣ ಘಟಕ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕತ್ತಲಗೆರೆ ಐಸಿಎಆರ್ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಬೆಂಗಳೂರು ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ರೈತರ ಸಬಲೀಕರಣಕ್ಕಾಗಿಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ತರಬೇತಿ, ಉತ್ತೇಜನ ಮತ್ತು ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಫಲವತ್ತಾದ ಭೂಮಿ ಹೆಚ್ಚು ಆಹಾರ ಧಾನ್ಯಗಳನ್ನು ಒದಗಿಸುತ್ತದೆ, ಆದರೆ ಇಂದು ಅನೇಕ ಕಾರಣಗಳಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದ್ದು, ಮಣ್ಣಿನ ಸವಕಳಿ ಸೇರಿ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದರು.
ವಿಶ್ವಸಂಸ್ಥೆ 2013 ರಿಂದ ಪ್ರತಿವರ್ಷ ಡಿಸೆಂಬರ್ನಲ್ಲಿ ಭೂಮಿ ದಿನವನ್ನು ಆಚರಿಸುತ್ತಾ ಬಂದಿದೆ. ಜತೆಗೆ ಮನುಕುಲ ಹಾಗೂ ಜೀವ ಜಗತ್ತನ್ನು ರಕ್ಷಿಸುವ ಉದ್ದೇಶದಿಂದ ಘೊಷಣೆ ರೂಪಿಸುವಲ್ಲಿ ಕಾರ್ಯಪ್ರವೃತ್ತಿಯಾಗಿದೆ. ಮಣ್ಣಿನ ಸವಕಳಿಯಿಂದ ವಿಶ್ವದಲ್ಲಿ ಪರಿಣಾಮಕಾರಿಯಾಗಿ ಮನುಕುಲದ ಪ್ರಗತಿ ಕುಸಿಯುತ್ತಿದೆ ಎಂದು ತಿಳಿಸಿದರು.
ಕತ್ತಲಗೆರೆ ಕೃಷಿ ವಿದ್ಯಾಲಯದ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಗಂಗಪ್ಪಗೌಡ ಬಿರಾದಾರ ಮಾತನಾಡಿ, ಮಾನವನ ಪ್ರಗತಿಗೆ ಭೂಮಿಯ ಆರೋಗ್ಯವೇ ಕಾರಣ. ಭೂಮಿ ಫಲವತ್ತಾ ಗಿದ್ದಾಗ ಮಾತ್ರ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಮತ್ತು ಅದನ್ನು ಸೇವಿಸಿದ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.
ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯಲ್ಲಿ ಅನಗತ್ಯ ಏರಿಳಿತ ಉಂಟಾಗುತ್ತಿದೆ. ಅವೈಜ್ಞಾನಿಕ ನೀರು ನಿರ್ವಹಣೆ ಮತ್ತು ಸಾಗುವಳಿಯಿಂದ ಮಣ್ಣು ಮಾಲಿನ್ಯವಾಗುತ್ತಿದೆ. ಇದರಿಂದ ಫಲವತ್ತತೆ ನಷ್ಟವಾಗಿ ಆಹಾರ ಉತ್ಪಾದನೆ ಕುಸಿಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೈತರನ್ನು ಉತ್ತೇಜಿಸಲು ಎರೆಹುಳು ಉತ್ಪಾದಿಸಲು ಬಳಸುವ ವರ್ವಿು ಬ್ಯಾಗ್, ಕಾಜ್ಜಿನಿಂಬೆ, ಪಪ್ಪಾಯ ಹಾಗೂ ಕೃಷಿ ಔಷಧ ಸಿಂಪಡಿಸುವ ಬ್ಯಾಟರಿ ಚಾಲಿತ ಸ್ಪ್ರೆಯ ರ್ಗಳನ್ನು ವಿತರಿಸಿದರು.
ವಿಜ್ಞಾನಿಗಳಾದ ಡಾ.ಬಿ.ಸಿ. ಹನುಮಂತಮೂರ್ತಿ, ಡಾ.ಬಿ.ಎಂ. ಆನಂದಕುಮಾರ್, ಡಾ. ಸಣ್ಣತಿಮ್ಮಪ್ಪ, ಡಾ. ಸಾಲಿಮಠ್, ಡಿ.ಎಂ. ಶ್ರೀಧರ್ವುೂರ್ತಿ, ಡಾ. ನಿರಂಜನ್ ಇದ್ದರು.