ಮಂಡ್ಯ: ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಮೂಲಕ ರೈತರ ಧ್ವನಿಯಾಗಿ ಬದುಕಿದವರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ವಿವೇಕಾನಂದ ರಂಗಮಂದಿರದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಮಂಗಳವಾರ ರಾತ್ರಿ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹೋರಾಟ ಗಾಥಾ ಸಾರಾಂಶದ ’ಡೈರೆಕ್ಟ್ ಆ್ಯಕ್ಷನ್’ ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ಅವರು, ನಂಜುಂಡಸ್ವಾಮಿ ಅವರ ಬದುಕು ಮತ್ತು ಜೀವನ ಚರಿತ್ರೆಯನ್ನು ಆಧರಿಸಿದ ನಾಟಕ ಪ್ರಸ್ತುತ ಹಾಗೂ ಶ್ಲಾಘನೀಯ. ಅವರ ಬದುಕಿನ ಚಿತ್ರಣವನ್ನು ಜನರು, ರೈತರು, ಸಾರ್ವಜನಿಕರಿಗೆ ತಿಳಿಸುವ ಕೆಲಸ ಅಭಿನಂದನೀಯ ಎಂದರು.
ಕಾನೂನು ಪದವಿ ಗಳಿಸಿದ ಅವರು ಹಣವನ್ನು ಗಳಿಸಿ ಶ್ರೀೀಮಂತರಾಗಬಹುದಿತ್ತು. ಆದರೆ ಅವರು ಗುಣ ಮತ್ತು ಹೋರಾಟದ ಚಿಂತನೆಗಳಲ್ಲಿ ಸಿರಿವಂತರಾದರು. ಇಂತಹ ಮಹಾನ್ ವ್ಯಕ್ತಿಯ ಬದುಕು ನಾಟಕ ರೂಪದಲ್ಲಿ ಬರುತ್ತಿರುವುದು ಪ್ರಶಂಸನೀಯ. ರೈತರು ನಾನು ಬೆಳೆಯಬೇಕು ಬೇರೆಯವರನ್ನು ಬೆಳೆಸಬೇಕು ಎಂಬ ಆದರ್ಶ ಹೊಂದಿದ್ದಾರೆ. ಇಂತಹ ರೈತರ ಬದುಕನ್ನು ಹಿಗ್ಗಿಸುವಂತಹ ಕೆಲಸವಾಗಬೇಕು. ಕುಗ್ಗಿಸುವ ಕೆಲಸ ಯಾವ ಸಮಾಜದಲ್ಲೂ ಆಗಬಾರದು. ಅವರು ಬೆಳೆದರೆ ನಾವು ಬೆಳೆಯಲು ಸಾಧ್ಯ ಎಂದರು.
ಸಾಮಾಜಿಕ ಹೋರಾಟಗಾರ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ನಂಜುಂಡಸ್ವಾಮಿ ಅವರ ಹೋರಾಟದ ಬದುಕನ್ನು ಪ್ರತಿ ಹಳ್ಳಿ, ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಅಗತ್ಯವಿದೆ. ಜಾಗತೀಕರಣದ ಸಂದರ್ಭದಲ್ಲಿ ಅವರು ನಡೆಸಿದ ಹೋರಾಟ ಆಗಿನ ಕಾಲದ ನನ್ನಂತವರಿಗೆ ಅರ್ಥವಾಗಲಿಲ್ಲ. ಅಂತಹ ಚಳವಳಿ ಎಷ್ಟು ಅಗತ್ಯವಿದೆ ಎಂಬುದನ್ನು ಮನಗಾಣಬೇಕು ಎಂದರು.
ಅವರ ಹೋರಾಟದ ಪರಿಣಾಮ ಈಗ ಗೊತ್ತಾಗುತ್ತಿದೆ. ಹೋರಾಟದ ಕಥೆಗಳು ಸಿನಿಮಾ, ನಾಟಕಗಳಾಗಿ ಮತ್ತಷ್ಟು ರೂಪದಲ್ಲಿ ಪಸರಿಸಬೇಕು. ಒಂದು ತಂಡದ ಮೂಲಕ ಜಿಲ್ಲೆಗೆ, ರೈತರಿಗೆ ಹೇಳುವ ಗುರಿಯಿಟ್ಟುಕೊಳ್ಳಬೇಕು. ಹಲವು ಸಂಘಟನೆಗಳ ಸಹಯೋಗದೊಂದಿಗೆ ಶಾಂತಿ ಸೌಹಾರ್ದಕ್ಕಾಗಿ ನಾಟಕವನ್ನು ಏರ್ಪಡಿಸಲು ಬೆಂಬಲಿಸಿದ ಅವರ ಮಕ್ಕಳಾದ ಪಚ್ಚೆ ನಂಜುಂಡಸ್ವಾಮಿ ಹಾಗೂ ಚುಕ್ಕಿ ನಂಜುಂಡಸ್ವಾಮಿ ಅವರಿಗೆ ಧನ್ಯವಾದಗಳು ತಿಳಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ, ಪಚ್ಚೆ ನಂಜುಂಡಸ್ವಾಮಿ, ಚುಕ್ಕಿ ನಂಜುಂಡಸ್ವಾಮಿ, ವಕೀಲ ಬಿ.ಟಿ.ವಿಶ್ವನಾಥ್, ಸುಂಡಹಳ್ಳಿ ಮಂಜುನಾಥ್, ಬೇಲೂರು ಸೋಮಶೇಖರ್, ಸಿ.ಕೆ.ನಾಗರಾಜು, ಶಂಭುನಹಳ್ಳಿ ಕೃಷ್ಣ, ಎಂ.ಬಿ.ನಾಗಣ್ಣಗೌಡ, ಗಾಮನಹಳ್ಳಿ ಸ್ವಾಮಿ, ವೆಂಕಟಗಿರಿಯಯ್ಯ, ಕೃಷ್ಣ ಇತರರಿದ್ದರು.
ನಟರಾಜ್ ಹುಳಿಯಾರ್ ರಚನೆಯ ನಗ್ನ ಥಿಯೇಟರ್ ನಿರ್ಮಾಣದ ಕಬಡ್ಡಿ ಬಾಬು ನಿರ್ದೇಶನದ ‘ಡೈರೆಕ್ಟ್ ಆ್ಯಕ್ಷನ್’ ನಾಟಕದ 11ನೇ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಎಂ.ಡಿ.ನಂಜುಂಡಸ್ವಾಮಿ ಪಾತ್ರದಲ್ಲಿ ನಟಿಸಿದ ರಾಮನಗರದ ಸಂಪತ್ ಮೈತ್ರೇಯ ಅವರು ಪಾತ್ರಕ್ಕೆ ಜೀವ ಕಳೆ ತಂದುಕೊಡುವ ಮೂಲಕ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.