ಹುಕ್ಕೇರಿ: ನೇರ ನಡೆ, ನುಡಿ ಮೂಲಕ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದ ದಿ.ಉಮೇಶ ಕತ್ತಿ ಅವರ ಕಾರ್ಯ ಸ್ಮರಣೀಯ ಎಂದು ಸ್ಥಳೀಯ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿ.ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹುಕ್ಕೇರಿಯಲ್ಲಿ 40 ವರ್ಷ ಮನೆ ಮಗನಾಗಿ ದಿ.ಉಮೇಶ ಕತ್ತಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿ ಕೃತಜ್ಞತಾ ಭಾವ ಮೆರೆಯಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ನಿಖಿಲ ಕತ್ತಿ ಮಾತನಾಡಿ, ತಂದೆ ದಿ.ಉಮೇಶ ಕತ್ತಿ ಅವರು ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂಬುದು ಅವರ ಅಗಲಿಕೆ ಬಳಿಕ ಗೊತ್ತಾಗಿದೆ. ಅವರ ಸಾಧನೆ ಹಾಗೂ ಜನಪರ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿವೆ ಎಂದು ಭಾವನಾತ್ಮಕ ನುಡಿಗಳನ್ನಾಡಿದರು.
ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹಾಗೂ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ವಿಶ್ವರಾಜ ಶುಗರ್ಸ್ ಸ್ಥಾಪನೆ ಮತ್ತು ಕಣಗಲಾ ಕೈಗಾರಿಕಾ ಪ್ರದೇಶಕ್ಕೆ ಉದ್ಯಮಗಳನ್ನು ತಂದಿದ್ದಾರೆ ಎಂದರು.
ದಿ.ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆಯನ್ನು ಮೊಮ್ಮಕ್ಕಳು ಲೋಕಾರ್ಪಣೆಗೊಳಿಸಿದರು. ಶೀಲಾ ಉಮೇಶ ಕತ್ತಿ, ಜಯಶ್ರೀ ರಮೇಶ ಕತ್ತಿ, ಶ್ರುತಿ ನಿಖಿಲ ಕತ್ತಿ, ಸ್ನೇಹಾ ನಿತೀನದೇವ, ಮುಖಂಡರಾದ ಆರ್.ಟಿ.ಶಿರಾಳಕರ, ಅಪ್ಪಾಸಾಹೇಬ ಖೆಮಲಾಪುರೆ, ಬಸವರಾಜ ಬಂಬಲವಾಡಿ, ಸಿದ್ಧಲಿಂಗಯ್ಯ ಕಡಹಟ್ಟಿ, ಸಂದೀಪ ಕತ್ತಿ, ಸುಧೀರ ಕತ್ತಿ, ಮಹಾನಿಂಗ ಶೆಟ್ಟಿ, ಅಶೋಕ ಬೆಲ್ಲದ, ಮುರಗೇಶ ಕತ್ತಿ, ಪಿ.ಡಿ.ಚೌಗಲಾ, ಮಲ್ಲಿಕಾರ್ಜುನ ಪೂಜೇರಿ, ವಿಎಸ್‌ಎಲ್ ಕಾರ್ಖಾನೆಯ ಮುಖೇಶ ಕುಮಾರ, ಎಸ್.ಎಸ್.ಕುಲಕರ್ಣಿ, ಸಿದ್ದು ಬಾನಿ, ಎಸ್.ಬಿ. ಪಾಟೀಲ, ಶ್ರೀಶೈಲ ಹೀರೆಮಠ ಇತರರಿದ್ದರು.