ಕಾರವಾರ: ಮುಡಗೇರಿಯಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಂದಾಗಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ತಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯ ನಂತರ ಮಾತನಾಡಿದ ಅವರು, 73.6 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಲಾಗುತ್ತಿದೆ. 170 ರೈತರಿಗೆ ಪ್ರತಿ ಎಕರೆಗೆ 50 ಲಕ್ಷದಂತೆ ಪರಿಹಾರ ನೀಡಲಾಗುತ್ತಿದೆ. ಪರಿಹಾರ ಪಡೆಯಲು ರೈತರು ಋಣ ಭಾರ ಪ್ರಮಾಣಪತ್ರ, ಹಕ್ಕು ದಾಖಲೆ, 15 ವರ್ಷದ ಹಿಂದಿನ ಆರ್‌ಟಿಸಿ ಹೀಗೆ ಒಟ್ಟು 15 ದಾಖಲೆಗಳನ್ನು ಹಾಜರುಪಡಿಸಲು ಕೆಐಎಡಿಬಿ ನೋಟಿಸ್ ನೀಡಿತ್ತು.
ಈ ದಾಖಲೆಗಳನ್ನು ಸಿದ್ಧ ಮಾಡಿಕೊಡಲು ಮಧ್ಯವರ್ತಿಗಳು ಹುಟ್ಟಿಕೊಂಡ ಸುದ್ದಿಯಿತ್ತು. ರೈತರಿಗೆ ಉಂಟಾಗುವ ಅನ್ಯಾಯ ತಡೆಯಲು ಕೆಐಎಡಿಬಿ, ತಹಸೀಲ್ದಾರ್ ಹಾಗೂ ತಾಪಂ ಇಒ ಅವರ ಜತೆಗೂಡಿ ಸಭೆ ನಡೆಸಲಾಗಿದೆ. 15 ರಲ್ಲಿ 10 ದಾಖಲೆಗಳನ್ನು ತಹಸೀಲ್ದಾರ್ ಸ್ವತಃ ಸಂಗ್ರಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ:ಅವಧಿಗೂ ಮುಂಚೆ ಉಪ್ಪು ನೀರಿನ ಕಾಟ
ಭೂ ಮಾಲೀಕರು ತಮ್ಮ ಪಾನ್ ಅಥವಾ ಆಧಾರ ಕಾರ್ಡ್, ಒಂದಕ್ಕಿಂತ ಹೆಚ್ಚು ಹಕ್ಕುದಾರರಿದ್ದರೆ ಜಂಟಿ ಬ್ಯಾಂಕ್ ಖಾತೆ ವಿವರ, ಜಮೀನಿನ ಮೂಲ ಮಾಲೀಕ ಮೃತಪಟ್ಟಿದ್ದಲ್ಲಿ ಮಕ್ಕಳ ವಂಶವೃಕ್ಷ ಮುಂತಾದ ದಾಖಲೆಗಳನ್ನು ಮಾತ್ರ ಸಲ್ಲಿಸಿದಲ್ಲಿ ಶೀಘ್ರದಲ್ಲಿ ಭೂ ಮಾಲೀಕರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ನೇರವಾಗಿ ಹಣ ಜಮಾ ಮಾಡಲಾಗುವುದು. ಭೂ ಮಾಲೀಕರು ಮೂರು ನಮೂನೆಗಳಲ್ಲಿ ಸಲ್ಲಿಸಬೇಕಾದ ದೃಢೀಕರಣ ಪ್ರತ್ರವನ್ನೂ ಎಲ್ಲ ಸಂತ್ರಸ್ಥರ ಮನೆಗಳಿಗೆ ಮುಟ್ಟಿಸುವ ಕೆಲಸವನ್ನು ತಹಸೀಲ್ದಾರ್ ಕಚೇರಿ ಮಾಡಲಿದೆ ಎಂದು ಸತೀಶ ಸೈಲ್ ವಿವರಿಸಿದರು.
ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ನವೀನ, ಇಇ ಬಿ.ಟಿ.ಪಾಟೀಲ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜೆ.ಜಯಂತ್, ತಹಸೀಲ್ದಾರ್ ನಿಶ್ಚಲ ನರೋನಾ, ತಾಪಂ ಇಒ ಆನಂದಕುಮಾರ್ ವೇದಿಕೆಯಲ್ಲಿದ್ದರು.
ಸದ್ಯ 73.6 ಎಕರೆಯಲ್ಲಿ 10 ಗುಂಟೆಯಿಂದ 2 ಎಕರೆವರೆಗೆ ವಿಭಿನ್ನ ವಿಸ್ತೀರ್ಣದ ಪ್ಲಾಟ್‌ಗಳನ್ನು ನಿರ್ಮಾಣ ಮಾಡಿ ಕೈಗಾರಿಕೋದ್ಯಮಿಗಳಿಗೆ ಹಂಚಲಾಗುವುದು.
ಭಾರತೀಯ ನೌಕಾಸೇನೆ, ಅಣು ವಿದ್ಯುತ್ ನಿಗಮಕ್ಕೆ ಪತ್ರ ಬರೆಯಲಾಗಿದ್ದು, ಅವುಗಳಿಗೆ ಸಂಬಂಧಿಸಿದ ಕೈಗಾರಿಕೆ ಪ್ರಾರಂಭಿಸಲು ಪ್ರಯತ್ನ ನಡೆದಿದೆ. ಅಲ್ಲದೆ, ಗೋವಾದ ಕೈಗಾರಿಕೆಗಳಿಗೂ ಆಹ್ವಾನ ನೀಡಲಿದ್ದೇವೆ ಎಂದು ಸತೀಶ ಸೈಲ್ ತಿಳಿಸಿದರು.
ಮುಡಗೇರಿಯಲ್ಲಿ 209 ಎಕರೆ ಜಮೀನಿನಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ 1997 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಅದರಲ್ಲಿ ಮೊದಲ ಹಂತದಲ್ಲಿ 73.6 ಎಕರೆ ಭೂ ಸ್ವಾಧೀನಕ್ಕೆ 2005 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಪರಿಹಾರದ ಗೊಂದಲದಿಂದ ಇಷ್ಟು ದಿನ ಜಮೀನು ಸ್ವಾಧೀನ ಪಡೆಯಲು ವಿಳಂಬವಾಯಿತು. ಮುಂದಿನ ದಿನದಲ್ಲಿ ಕೈಗಾರಿಕೋದ್ಯಮಿಗಳ ಸ್ಪಂದನೆಯನ್ನು ಆಧರಿಸಿ ಬಾಕಿ ಉಳಿದ 134 ಎಕರೆಯಲ್ಲಿ 332 ರೈತರ ಜಮೀನನ್ನು ಭೂಸ್ವಾಧೀನ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಸೈಲ್ ವಿವರಿಸಿದರು.
ಮುಡಗೇರಿಯ ಎಲ್ಲ 170 ಭೂ ಮಾಲೀಕರಿಗೆ ಶೀಘ್ರ ನೋಟಿಸ್ ಜಾರಿ ಮಾಡಲಾಗುವುದು. ಯಾರೂ ಯಾವುದೇ ದಾಖಲೆ ಸಂಗ್ರಹಕ್ಕೆ ಮಧ್ಯವರ್ತಿಗಳಿಗೆ ಹಣ ನೀಡಬೇಕಾದ ಅಗತ್ಯವಿಲ್ಲ. ಆಧಾರ ಕಾರ್ಡ್, ಪಾನ್ ಕಾರ್ಡ್, ಜಂಟಿ ಬ್ಯಾಂಕ್ ಖಾತೆಯ ವಿವರ ಹಾಗೂ ವಂಶವೃಕ್ಷ ಸಲ್ಲಿಸಿದಲ್ಲಿ ನೇರವಾಗಿ ಕೆಐಎಡಿಬಿಯಿಂದ ಅವರವರ ಖಾತೆಗಳಿಗೆ ಹಣ ಜಮಾ ಆಗಲಿದೆ. ಕೆಲವೇ ದಿನದಲ್ಲಿ ಡಿಸಿ ನೇತೃತ್ವದಲ್ಲಿ ಮುಡಗೇರಿಯಲ್ಲಿ ಇನ್ನೊಂದು ಸಭೆ ಮಾಡಲಾಗುವುದು. ಸತೀಶ ಸೈಲ್ ಶಾಸಕ, ಕಾರವಾರ, ಅಂಕೋಲಾ ವಿಧಾನಸಭಾ ಕ್ಷೇತ್ರ