ಶೃಂಗೇರಿ: ಶ್ರೀಶಾರದಾಪೀಠದ ಶಕ್ತಿ ದೇವತೆಯಾದ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಸೋಮವಾರ ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ನಡೆಯಿತು.
ಜಿಪಂ ಮಾಜಿ ಸದಸ್ಯ ಬಿ.ಶಿವಶಂಕರ್ ಮಾತನಾಡಿ, ದೇವಿ ಸನ್ನಿಧಿಯಲ್ಲಿ ದೀಪೋತ್ಸವವನ್ನು ಒಟ್ಟಾಗಿ ಆಚರಿಸುತ್ತಿರುವುದು ಒಗ್ಗಟ್ಟಿನ ಸಂಕೇತವಾಗಿದೆ. ನಮ್ಮ ಶ್ರದ್ಧಾ ಕೇಂದ್ರದಲ್ಲಿ ದೇವಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟ ಮಿತ್ರರನ್ನು ಕರೆದು ಪ್ರಸಾದ ವಿತರಣೆ ಮಾಡುವುದರಿಂದ ದೇವಿಯ ಕೃಪೆ ಲಭಿಸಲಿದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಉಮೇಶ್ ಪುದುವಾಳ್ ಮಾತನಾಡಿ, ಶ್ರೀ ಶಾರದಾ ಪೀಠದ ಶಕ್ತಿ ದೇವತೆ ಶ್ರೀಕಾಳಿಕಾಂಬಾ ದೇವಸ್ಥಾನದಲ್ಲಿ ಪ್ರತಿ ವರ್ಷ ದೀಪೋತ್ಸವ ನಡೆಸುತ್ತಿದ್ದಾರೆ. ಧಾರ್ಮಿಕ ಅನುಷ್ಠಾನದಲ್ಲಿ ದೀಪೋತ್ಸವವು ಒಂದಾಗಿದೆ ಎಂದರು.
ದೇವಿಗೆ ವಿಶೇಷ ಪೂಜೆ, ದೀಪೋತ್ಸವ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ, ಪಪಂ ಅಧ್ಯಕ್ಷ ವೇಣುಗೋಪಾಲ್, ಬಿಸಜಿಎಸ್ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಕೆ.ಸಿ.ನಾಗೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ಮುಖಂಡರಾದ ಕೆ.ಎಸ್.ರಮೇಶ್, ಮಹೇಶ್ವರಪ್ಪ, ಅಂಬಲಮನೆ ಸುಬ್ರಹ್ಮಣ್ಯ, ರಾಮಕೃಷ್ಣರಾವ್ ಇದ್ದರು.