ಜಿಲ್ಲೆ

ಪ್ಲಾಸ್ಟಿಕ್ ತ್ಯಾಜ್ಯ ಕೊಟ್ಟರೆ ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ತಂದುಕೊಟ್ಟರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಉಪಾಹಾರ, ಊಟ ದೊರೆಯಲಿದೆ….!
ಇಂತಹದೊಂದು ವಿನೂತನ ಯೋಜನೆಯನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ. ಇದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ.


ಅರ್ಧ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಉಪಹಾರ, ಒಂದು ಕೆಜಿ ಕೊಟ್ಟರೆ ಊಟ ಉಚಿತವಾಗಿ ನೀಡಲಾಗುತ್ತದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ತಿಂಡಿಗೆ 5 ರೂ., ಊಟಕ್ಕೆ 10 ರೂ.ದರ ನಿಗದಿಪಡಿಸಲಾಗಿದೆ. ಇಲ್ಲಿ ಪ್ಲಾಸ್ಟಿಕ್ ತಂದುಕೊಟ್ಟವರು ಈ ಹಣವನ್ನು ಕೊಡದೆ ಉಚಿತವಾಗಿ ಉಪಾಹಾರ, ಊಟ ಮಾಡಬಹುದಾಗಿದೆ. ಇದಕ್ಕೆ ಮಿತಿ ಇಲ್ಲ. ಎಷ್ಟು ಬಾರಿ ಬೇಕಾದರೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಕೊಟ್ಟು ಆಹಾರ ಸೇವಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಇಂತಹ ಕ್ರಮದಿಂದ ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದಕ್ಕೆ ಕಡಿವಾಣ ಬೀಳಲಿದೆ. ಜತೆಗೆ, ವಿಲೇವಾರಿಗೂ ಕ್ರಮ ಕೈಗೊಳ್ಳಬಹುದು ಎನ್ನುವುದು ಜಿಲ್ಲಾಡಳಿತ, ಪಾಲಿಕೆಯ ಆಲೋಚನೆಯಾಗಿದೆ. ಈಗಾಗಲೇ ಇದು ಜಾರಿಗೆ ಬಂದಿದೆ. ಯಾರು ಬೇಕಾದರೂ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ವಿಶೇಷವಾಗಿ, ಪ್ಲಾಸ್ಟಿಕ್ ಸಂಗ್ರಹಿಸುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಆರಂಭಿಸಲಾಗಿದೆ.

ನಿಗದಿಪಡಿಸಿರುವ ಪ್ರಮಾಣದಷ್ಟೇ ತ್ಯಾಜ್ಯವನ್ನು ಸಂಗ್ರಹಿಸಿ ಕೊಡಬೇಕು ಎಂಬುದು ಕಡ್ಡಾಯವಿಲ್ಲ. ಸ್ವಲ್ಪ ಹೆಚ್ಚು-ಕಮ್ಮಿ ಇದ್ದರೂ ಉಚಿತವಾಗಿ ಊಟ-ತಿಂಡಿ ಕೊಡಲಾಗುತ್ತದೆ. ಈ ಕುರಿತು ಕ್ಯಾಂಟೀನ್ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಯೋಜನೆಯನ್ನು ಕೆಲವರು ಬಳಸಿಕೊಳ್ಳುತ್ತಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.