ಮಂಗಳೂರ: ಸೋಮೇಶ್ವರದಿಂದ ಸಸಿಹಿತ್ಲುವರೆಗಿನ ಸಮುದ್ರ ತೀರದ ರಸ್ತೆಯನ್ನು 24 ಮೀಟರ್‌ಗೆ ಮೀಸಲಿಟ್ಟು ಅದನ್ನು ಕೋಸ್ಟಲ್ ರಸ್ತೆಯಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಮುಡಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೀಚ್ ಮತ್ತು ಜಲಾಭಿಮುಖ (ವಾಟರ್‌ಫ್ರಂಟ್) ರಸ್ತೆಯಾಗಿ ಸಮುದ್ರ ಬದಿಯ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದನ್ನು ಮಾಸ್ಟರ್‌ಪ್ಲಾನ್‌ಗೆ ಒಳಪಡಿಸಿದರೆ ಪ್ರವಾಸೋದ್ಯಮಕ್ಕೆ ಪುಷ್ಟಿ ಸಿಗಲಿದೆ. ಇದೇ ವೇಳೆ ಕಣ್ಣೂರು ಭಾಗದಲ್ಲಿ ಮತ್ತೊಂದು ಜಲಾಭಿಮುಖಿ ರಸ್ತೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್‌ನಲ್ಲಿ ಸೇರ್ಪಡೆಗೊಳಿಸಲು ಸೂಚಿಸಲಾಗಿದೆ. ಇದರಿಂದ ರಸ್ತೆ ಸಂಪರ್ಕ ವ್ಯವಸ್ಥೆಯು ಜನರಿಗೆ ನಗರದೊಳಗಿನ ಪ್ರವೇಶವನ್ನು ವ್ಯಾಪಕಗೊಳಿಸಲಿದೆ. ಮಾಸ್ಟರ್ ಪ್ಲಾನ್ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಯೊಂದಿಗೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಮುಡಾ ವ್ಯಾಪ್ತಿಯಲ್ಲಿ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಮೂರು ಕಡೆ ವಸತಿ ಬಡಾವಣೆಗೆ ಲೇಔಟ್‌ಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಬೇಕು. ಕೊಣಾಜೆಯಲ್ಲಿ ನವೆಂಬರ್‌ನೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಲಾಗಿದೆ. ಶೇ. 20ರಷ್ಟು ಮಾತ್ರವೇ ಬುಕ್ಕಿಂಗ್ ಆಗಿದ್ದು, ಕಾಮಗಾರಿ ಶೀಘ್ರ ಮುಗಿದರೆ ಬುಕ್ಕಿಂಗ್‌ಗೆ ವೇಗ ಸಿಗಲಿದೆ. ಇಲ್ಲಿನ ಆದಾಯವನ್ನು ಇನ್ನೊಂದು ಬಡಾವಣೆಯ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಆಗಲಿದೆ. ನವೆಂಬರ್ ತಿಂಗಳಲ್ಲಿ ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕುಂಜತ್ತಬೈಲ್ ಲೇಔಟ್‌ನಲ್ಲಿ ಸಮಸ್ಯೆಯಾಗಿದ್ದು, ಅಲ್ಲಿ ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಭೂ ಖರೀದಿಯಾಗಿದೆ. ಅದಕ್ಕೆ ಮಾಡಿರುವ ವೆಚ್ಚ ನಷ್ಟ ಆಗದಂತೆ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ. ಅವೈಜ್ಞಾನಿಕವಾಗಿ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಸಮಸ್ಯೆ ಆಗಿದೆ. ಅದು ನಷ್ಟ ಆಗುವ ಪ್ರಾಜೆಕ್ಟ್ ಆಗಿ ಕಂಡು ಬರುತ್ತಿದೆ. ಅದರಿಂದ ಯಾವ ರೀತಿಯಲ್ಲಿ ಹೊರ ಬರಬೇಕಾಗಿದೆ ಎಂಬುದನ್ನು ನೋಡಬೇಕಾಗಿದೆ. ಚೇಳ್ಯಾರು ವಸತಿ ಬಡಾವಣೆಯ ಕಾಮಗಾರಿ ಮುಗಿಸಲು ಹಣದ ಅಗತ್ಯವಿದೆ. ಅದಕ್ಕಾಗಿ ಕೊಣಾಜೆಯ ಯೋಜನೆ ಪೂರ್ಣಗೊಳಿಸಿ ಅಲ್ಲಿನ ಆದಾಯದಿಂದ ಚೇಳ್ಯಾರು ವಸತಿ ಬಡಾವಣೆಯ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಐಟಿ ಪಾರ್ಕ್ ಕರಾವಳಿ ಪ್ರವಾಸೋದ್ಯಮದಲ್ಲಿ ಹೆಗ್ಗುರುತು
ಮಂಗಳೂರು ಮತ್ತು ಮೈಸೂರು ನಗರವನ್ನು ಪ್ರವಾಸೋದ್ಯಮ ತಾಣವಾಗಿಸಿ ಹೂಡಿಕೆದಾರರನ್ನು ಆಕರ್ಷಿಸುವ ತಾಣವಾಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ 135 ಕೋಟಿ ರೂ.ಗಳ ಐಟಿ ಪಾರ್ಕ್‌ಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಹತ್ವದ ನಿರ್ಧಾರ ಇದಾಗಿದೆ. ಹೂಡಿಕೆದಾರರು ಮಂಗಳೂರಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ. ವಾಣಿಜ್ಯ ಜಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಅದಕ್ಕೆ ಪೂರಕವಾಗಿ ಇಲ್ಲಿ ಸೌಹಾರ್ದ ವಾತಾವರಣದೊಂದಿಗೆ ಹೂಡಿಕೆ ಮಾಡುವವರಿಗೆ ಪೂರಕವಾಗಿ ಪಾರದರ್ಶಕ ವಾತಾವರಣ ರೂಪಿಸಲು ಸರ್ಕಾರ ಬದ್ಧವಾಗಿದೆ. ಐಟಿ ಪಾರ್ಕ್ ಯೋಜನೆ ಕರಾವಳಿಯ ಪ್ರವಾಸೋದ್ಯಮದಲ್ಲಿ ಮಹತ್ವದ ಹೆಗ್ಗುರುತು ಆಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.