ವಿಜಯವಾಣಿ ಸುದ್ದಿಜಾಲ ಮಂಗಳೂರು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಭ್ರಷ್ಟಾಚಾರದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕೆಲವರು ಅನಾವಶ್ಯಕವಾಗಿ ಅಪಪ್ರಚಾರ ಮಾಡ್ತಾ ಇದಾರೆ. ತನಿಖೆಯಿಂದ ಎಲ್ಲವೂ ಹೊರಗೆ ಬರಲಿದೆ. ತನಿಖೆ ಆಗುತ್ತಾ ಇದೆ. ಬಿಜೆಪಿಯ ಕರ್ಮ ಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲು ಶುಕ್ರವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದರು.
ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಅಧಿಕಾರಿಗಳ ತಂಡ ರಚನೆಯಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರೋದು ದೊಡ್ಡ ಸಮಸ್ಯೆ.
ಆದರೆ ಅದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಆಗಿಲ್ಲ. ಬಿಲ್ ಪಾವತಿಗೆ ತೊಂದರೆ ಇಲ್ಲ. ಆದರೆ ಕೆಲಸಗಳು ಆಗಿದ್ಯಾ ಎಂದು ತನಿಖೆ ಆಗಬೇಕು. ಮುಂದಿನ ಮೂವತ್ತು ದಿನಗಳ ಒಳಗಡೆ ವರದಿ ಸಿಗಲಿದೆ. ನ್ಯಾಯಯುತವಾಗಿ ಆದ ಕೆಲಸಗಳಿಗೆ ಬಿಲ್ ಪಾವತಿ ಆಗಲಿದೆ ಎಂದು ಅವರು ಹೇಳಿದರು.
ನಮ್ಮ ಗ್ಯಾರಂಟಿ ಸ್ಕೀಮ್ಗಳು ಜನರಿಗೆ ಮುಟ್ಟುತ್ತಿವೆ. ಅನುಕೂಲ ಆಗುತ್ತಾ ಇದೆ. ಜನರ ಅಭಿಪ್ರಾಯಕ್ಕೆ ಮಸಿ ಬಳಿಯಲು, ಕೆಟ್ಟ ಹೆಸರು ತರಲು ನಿರಂತರ ಪ್ರಯತ್ನ ನಡೆಯುತ್ತಿದೆ. ನಮ್ಮತ್ರ ಪೆನ್ ಡ್ರೈವ್ ಇದೆ, ಸಿಡಿ ಇದೆ, ದಾಖಲೆ ಇದೆ ಅಂತ ಸುಮ್ಮನೆ ಹೇಳ್ತಾ ಇದಾರೆ. ನಾವು ಅಥವಾ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡ್ತಾ ಇದೀವಿ ಎಂದು ಅವರು ತಿಳಿಸಿದರು.