ಜಿಲ್ಲೆ

ವಿಪತ್ತುಗಳು ಎದುರಾದಾಗ ಎದೆಗುಂದದಿರಿ

ಲಲಾಟಾಕ್ಷ ಎಸ್

ಅರಕಲಗೂಡು: ಪ್ರಾಕೃತಿಕ ಹಾಗೂ ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಎದುರಿಸಿ ಪಾರಾಗುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಜತೆಗೆ ಇತರರನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಎನ್‌ಡಿಆರ್‌ಎಫ್ ತಂಡದ ಮುಖ್ಯಸ್ಥ ಎಸ್.ಎಲ್.ಜಾಟಿಯಾ ತಿಳಿಸಿದರು.


ಪಟ್ಟಣದ ಶಿಕ್ಷಕರ ಭವನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಕ್ಕಳ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಪತ್ತುಗಳು ಎದುರಾದಾಗ ಎದೆಗುಂದದೆ ಅದನ್ನು ಎದುರಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಪ್ರಾಕೃತಿಕ ಹಾಗೂ ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳಿಂದ ಸ್ವಯಂ ರಕ್ಷಣೆ ಮಾಡುವ ಮಾರ್ಗಗಳ ಕುರಿತು ತಿಳಿವಳಿಕೆ ಮೂಡಿಸುವುದರಿಂದ ಆಪತ್ತಿಗೊಳಗಾದವರನ್ನು ರಕ್ಷಿಸಬಹುದು ಎಂದರು.


ಪ್ರಕೃತಿ ವಿಕೋಪ, ಅಪಘಾತ, ನೀರಿನಲ್ಲಿ ಮುಳುಗುವುದು, ಬೆಂಕಿ ಅವಘಡಗಳಿಂದ ರಕ್ಷಸಿಕೊಳ್ಳುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿರಸ್ತೇದಾರ್ ಸಿ.ಸ್ವಾಮಿ, ಕಂದಾಯ ನಿರೀಕ್ಷಕ ಲೋಕೇಶ್, ಗ್ರಾಮಲೆಕ್ಕಾಧಿಕಾರಿ ವಿನಾಯಕ ಹಿರೇಮಠ್, ಇಸಿಒ ರಾಜು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಇದ್ದರು.