ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ದಿನಕರ ದೇಸಾಯಿ ಅವರ ಕೊಡುಗೆ ಅನನ್ಯವಾದುದು. ಹಳ್ಳಿಗಳಲ್ಲಿ ಶಾಲೆಗಳು ಇಲ್ಲದ ಸಮಯದಲ್ಲಿ ಶಾಲೆಗಳನ್ನು ನಿರ್ಮಿಸಿ, ಜನರು ಮುಖ್ಯ ವಾಹಿನಿಗೆ ಬರಲು ದೇಸಾಯಿ ಅವರ ಕೊಡುಗೆ ಅಪಾರವಾಗಿದೆ ಎಂದು ಬೇಡ್ಕಣಿ ಜನತಾ ವಿದ್ಯಾಲಯದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಬೇಡ್ಕಣಿ ಜನತಾ ವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಸಾಮಾಜಿಕ ಸಾಹಿತ್ಯಿಕ ಕೊಡುಗೆ ಕುರಿತು ಉಪನ್ಯಾಸ, ಚುಟುಕು ವಾಚನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮತ್ತು ಸರ್ಕಾರ ದಾರಿತಪ್ಪಿದಾಗ ತಮ್ಮ ಚುಟುಕುಗಳ ಮೂಲಕ ಎಚ್ಚರಿಸುವ ಕೆಲಸವನ್ನು ದೇಸಾಯಿ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಉಪನ್ಯಾಸಕ ರತ್ನಾಕರ ನಾಯ್ಕ, ದಿನಕರ ದೇಸಾಯಿ ಅವರ ಸಾಮಾಜಿಕ, ಸಾಹಿತ್ಯಿಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗೋಪಾಲ್ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿದ್ದರು. ರಂಗಕಲಾವಿದ ಗಣಪತಿ ಹೆಗಡೆ ಗುಂಜಗೋಡು, ಪತ್ರಕರ್ತ ಸುಜಯ್ ಭಟ್ಟ ಮುತ್ತಿಗೆ ಮಾತನಾಡಿದರು. ತಾಲೂಕು ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಉಪಸ್ಥಿತರಿದ್ದರು.ಶಾಲಾ ಮುಖ್ಯಾಧ್ಯಾಪಕಿ ಪ್ರತಿಮಾ ಪಾಲೇಕರ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಿಕ್ಷಕ ಜಿ.ಟಿ. ಭಟ್ಟ ಸ್ವಾಗತಿಸಿದರು. ಶಿಕ್ಷಕ ವಿ.ಟಿ. ಗೌಡ ನಿರ್ವಹಿಸಿದರು. ಕಸಾಪ ಕೋಶಾಧ್ಯಕ್ಷ ಪಿ.ಬಿ. ಹೊಸೂರು ವಂದಿಸಿದರು.