ನರಗುಂದ: ತಾಲೂಕಿನ ಶಿರೋಳ ಗ್ರಾಮದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಸಮಿತಿ ಪ್ರಾಂಗಣ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಪ್ರಾಂಗಣದ ತುಂಬಾ ಕಸ, ಕಂಟಿ ಬೆಳೆದಿವೆ. ಜಾನುವಾರುಗಳ ಹಾವಳಿ ಮಿತಿಮೀರಿದೆ. ವಲಸಿಗರು ಬೇಕಾಬಿಟ್ಟಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಉಪಮಾರುಕಟ್ಟೆಯು ಮೂಲ ಸೌಕರ್ಯದಿಂದ ವಂಚಿತವಾಗಿದೆ.
27 ಎಕರೆ 3 ಗುಂಟೆ ವಿಶಾಲವದ ಜಾಗವಿರುವ ಇಲ್ಲಿನ ಉಪಮಾರುಕಟ್ಟೆಯನ್ನು 1988ರಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಎಪಿಎಂಸಿಯ ಉಪ ಕಚೇರಿ, ವ್ಯಾಪಾರಸ್ಥರಿಗಾಗಿ ಮೂರು ಗೋದಾಮುಗಳಿವೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ಕಚೇರಿಯಲ್ಲಿ ಯಾವ ಸಿಬ್ಬಂದಿಯೂ ಇಲ್ಲ. ಕುಡಿಯುವ ನೀರು, ಸಮರ್ಪಕ ವಿದ್ಯುತ್, ರಸ್ತೆ, ಚರಂಡಿಗಳ ನಿರ್ವಹಣೆ ಸೇರಿ ಅಗತ್ಯ ಮೂಲ ಸೌಕರ್ಯ ಇಲ್ಲಿಲ್ಲ. ರೈತರು ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ನಿರ್ವಿುಸಲಾಗಿರುವ ಮುಚ್ಚು ಹರಾಜು ಕಟ್ಟೆ ಇದ್ದೂ ಇಲ್ಲದಂತಾಗಿದೆ.
ಮೂರು ಗೋದಾಮುಗಳಿದ್ದರೂ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೃಷಿ ಮಾರುಕಟ್ಟೆ ನಿಯಮಾವಳಿಯಂತೆ ಪರವಾನಗಿ ಹೊಂದಿದ ವ್ಯಾಪಾರಸ್ಥರು ಕಡ್ಡಾಯವಾಗಿ ಕೃಷಿ ಮಾರುಕಟ್ಟೆಯಲ್ಲಿಯೇ ವ್ಯಾಪಾರ-ವಹಿವಾಟು ನಡೆಸಬೇಕು. ಆದರೆ, ಇಲ್ಲಿ ಯಾವುದೇ ನಿಯಮಾಗಳಿಗಳು ಪಾಲನೆಯಾಗುತ್ತಿಲ್ಲ. ಮುಖ್ಯ ಮಾರುಕಟ್ಟೆ ಬೀದಿಯಲ್ಲಿರುವ ವ್ಯಾಪಾರಸ್ಥರು ಅಲ್ಲಿಯೇ ವ್ಯಾಪಾರ ನಡೆಸುತ್ತಿದ್ದಾರೆ.
ವ್ಯಾಪಾರ-ವಹಿವಾಟು ನಡೆಸುವ ಪರವಾನಗಿ ಹೊಂದಿರುವ ವರ್ತಕರಿಂದ ನರಗುಂದದ ಮುಖ್ಯ ಕೃಷಿ ಮಾರುಕಟ್ಟೆಗೆ 2018ಕ್ಕಿಂತ ಮೊದಲು ಹೆಚ್ಚಿನ ಸೆಸ್ ಬರುತ್ತಿತ್ತು. ಆದರೆ, 2020ರಲ್ಲಿ ಆದ ಕೃಷಿ ಮಾರುಕಟ್ಟೆ ಕಾಯ್ದೆ ತಿದ್ದುಪಡಿಯಿಂದಾಗಿ ಸೆಸ್ ಸಂಗ್ರಹಗೊಳ್ಳುತ್ತಿಲ್ಲ. ಶಿರೋಳದಲ್ಲಿ ಅಧಿಕೃತ ಪರವಾನಗಿ ಪಡೆದಿರುವ 15 ವರ್ತಕರಿದ್ದಾರೆ. ಕೃಷಿ ಮುಖ್ಯಮಾರುಕಟ್ಟೆ ಅಧಿಕಾರಿಗಳು ಶಿರೋಳದ ಉಪಮಾರುಕಟ್ಟೆಯಲ್ಲಿಯೇ ವ್ಯಾಪಾರ ನಡೆಸಲು ವರ್ತಕರಿಗೆ ಸೂಚಿಸಿದರೂ ಅವರೂ ವಹಿವಾಟು ನಡೆಸಲು ಮನಸು ಮಾಡುತ್ತಿಲ್ಲ. ಇದರಿಂದಾಗಿ ಉಪಮಾರುಕಟ್ಟೆ ನಿರುಪಯುಕ್ತವಾಗಿದೆ. ಇಲ್ಲಿರುವ ಸುಮಾರು 65 ಸೈಟ್ಗಳನ್ನು ವರ್ತಕರು ಅಂಗಡಿ ತೆರೆದು ವಹಿವಾಟು ನಡೆಸಲು ಮೀಸಲಿರಿಸಲಾಗಿದೆಯಾದರೂ ಈವರೆಗೆ ಅವು ಉಪಯೋಗಕ್ಕೆ ಬಂದಿಲ್ಲ.
ಶಿರೋಳದಲ್ಲಿ ವರ್ತಕರು ಉಪಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿಲ್ಲ. ಅನೇಕ ಬಾರಿ ನೋಟಿಸ್ ನೀಡಿದರೂ ಅವರು ಸ್ಪಂದಿಸುತ್ತಿಲ್ಲ. ವಹಿವಾಟು ನಡೆಯದಿರುವುದರಿಂದ ಯಾವ ಸಿಬ್ಬಂದಿಯೂ ಅಲ್ಲಿಲ್ಲ. ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2020-21ರಲ್ಲಿ ನಬಾರ್ಡ್ನಿಂದ 7 ಕೋಟಿ ರೂ. ಹಾಗೂ ಆರ್ಕೆವಿವೈದಿಂದ 60 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಆರ್ಕೆವಿವೈ ಅನುದಾನದಲ್ಲಿ ಶಿರೋಳ, ಕೊಣ್ಣೂರ ಮತ್ತು ಚಿಕ್ಕನರಗುಂದ ಉಪಮಾರುಕಟ್ಟೆಗಳಲ್ಲಿ ಮುಚ್ಚು ಹರಾಜು ಕಟ್ಟಡ ನಿರ್ವಿುಸಲಾಗಿದೆ. ನಬಾರ್ಡ್ ಅನುದಾನದಲ್ಲಿ ನರಗುಂದ ಮುಖ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ನಿರ್ವಣ, ವರ್ತಕರಿಗಾಗಿ ಮಳಿಗೆಗಳು ಮತ್ತು ಮೂಲಸೌಕರ್ಯ ಸೌಲಭ್ಯ ಕಲ್ಪಿಸಲಾಗಿದೆ. ಅನುದಾನದ ಕೊರತೆಯಿಂದಾಗಿ ಶಿರೋಳ ಉಪಕೃಷಿ ಮಾರುಕಟ್ಟೆಯ ಆವರಣ ಗೋಡೆ ನಿರ್ಮಾಣ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. | ರಾಘವೇಂದ್ರ ಸಜ್ಜನ ವ್ಯವಸ್ಥಾಪಕ, ಮುಖ್ಯ ಕೃಷಿ ಮಾರುಕಟ್ಟೆ, ನರಗುಂದ