ಹರಿಪ್ರಸಾದ್ ನಂದಳಿಕೆ ಕಾರ್ಕಳ
ನಿಟ್ಟೆ ಗ್ರಾಪಂ ವ್ಯಾಪ್ತಿಯ ಪರಪ್ಪಾಡಿಯಿಂದ ಬಾರಾಡಿ, ಕಾಂತಾವರ ಭಾಗವನ್ನು ಸಂಪರ್ಕಿಸುವ ಪರಪ್ಪಾಡಿ ರಸ್ತೆಯಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಹಲವು ದಶಕಗಳ ಹಿಂದೆ ಕಟ್ಟಲಾದ ಸೇತುವೆ ಸಂಪೂರ್ಣ ಶಿಥಿಲಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೇತುವೆ ತಳಭಾಗ ಹಾಗೂ ಮೇಲ್ಭಾಗದಲ್ಲೂ ಸಿಮೆಂಟ್ ಸ್ಲಾೃಬ್ ಎದ್ದು ಕಬ್ಬಿಣದ ರಾಡ್ ಗೋಚರಿಸುತ್ತಿದೆ. ಸೇತುವೆ ಮಧ್ಯ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ಅದರ ಅರಿವಿಲ್ಲದೆ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುವಂತಾಗಿದೆ.
ಪರಪ್ಪಾಡಿ ರಸ್ತೆ ಕೆಲ ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆಯಾಗಿ ನಿರ್ಮಾಣ ಮಾಡಲಾಗಿತ್ತಾದರೂ ಶಾಂಭವಿ ನದಿಗೆ ಅಡ್ಡಲಾಗಿ ಇರುವ ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಈ ಭಾಗದಲ್ಲಿ ಬಸ್ ಸಂಚಾರ ಇಲ್ಲದೆ ಬಾಡಿಗೆ ಕಾರು, ಆಟೋ ರಿಕ್ಷಾ ಹಾಗೂ ಸಣ್ಣಪುಟ್ಟ ವಾಹನಗಳೇ ಹೆಚ್ಚಾಗಿ ಓಡಾಡುವುದರಿಂದ ಸೇತುವೆ ಮೇಲ್ಭಾಗದಲ್ಲಿ ಬಿದ್ದ ಹೊಂಡದಿಂದ ಅಪಾಯಕಾರಿಯಾಗಿದೆ. ಕೆಲವೊಂದು ಬಾರಿ ಲಾರಿ ಟಿಪ್ಪರ್‌ನಂತಹ ಭಾರಿ ವಾಹನ ಓಡಾಡುವ ಸಂದರ್ಭ ಇಡೀ ಸೇತುವೆ ಅಲುಗಾಡುತ್ತದೆ. ಹೀಗಾಗಿ ಯಾವುದೇ ಸಂದರ್ಭ ಸೇತುವೆ ಕುಸಿದು ಬೀಳುವ ಸಾಧ್ಯತೆಗಳಿವೆ ಎನ್ನುವುದು ಸ್ಥಳೀಯರ ಆರೋಪ.
ಸೇತುವೆಯ ಎರಡೂ ಬದಿಯಲ್ಲಿ ಕಾಂಕ್ರೀಟಿನಿಂದ ಕೂಡಿದ ಸುಂದರ ರಸ್ತೆಯಿದ್ದು, ಸೇತುವೆ ಬಳಿಯಲ್ಲಿ 100 ಮೀ ಉದ್ದದ ರಸ್ತೆಗೆ ಇನ್ನೂ ಡಾಂಬರು ಅಥವಾ ಕಾಂಕ್ರಿಟೀಕರಣ ನಡೆದಿಲ್ಲ. ಹೀಗಾಗಿ ವೇಗವಾಗಿ ಬರುವ ವಾಹನಗಳು ಜಲ್ಲಿ ಕಲ್ಲುಗಳಿದ ಕೂಡದ ರಸ್ತೆಯಲ್ಲಿ ಒಮ್ಮೆಲ್ಲೆ ಬ್ರೇಕ್ ಹಾಕುವುದರ ಪರಿಣಾಮ ಅಪಘಾತಕ್ಕೆ ಕಾರಣವಾಗುತ್ತಿದೆ.
ಕಾರ್ಕಳ ಪಡುಬಿದ್ರಿ ಸಾಗುವ ರಾಜ್ಯ ಹೆದ್ದಾರಿಯಿಂದ ನಿಟ್ಟೆಯ ಪರಪ್ಪಾಡಿಯಲ್ಲಿ ಸಂಪರ್ಕ ಪಡೆಯುವ ಈ ರಸ್ತೆಯೂ ಮುಂದೆ ಬಾರಾಡಿ ಸಾಗಿ ಬಳಿಕ ಚಿಲಿಂಬಿಯಾಗಿ ಬೆಳುವಾಯಿ ಹಾಗೂ ಸಾಣೂರು ಮತ್ತು ಮೂಡುಬಿದಿರೆಯನ್ನು ಸಂಪರ್ಕಿಸಲು ಹತ್ತಿರದ ರಸ್ತೆಯಾಗಿದ್ದು, ಈ ಭಾಗದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಮಂದಿ ಇದೇ ರಸ್ತೆಯನ್ನು ಅವಲಂಬಿಸಿಕೊಂಡು ನಿತ್ಯ ಸಾಗುತ್ತಾರೆ. ಹೀಗಾಗಿ ಪ್ರಮುಖ ಸಂಪರ್ಕ ಕೊಂಡಿಯಾದ ಈ ರಸ್ತೆಯಲ್ಲಿರುವ ಸೇತುವೆಯೂ ಶಿಥಿಲ ವ್ಯವಸ್ಥೆಗೆ ತಲುಪಿದ್ದು, ಒಂದು ವೇಳೆ ಕುಸಿದು ಬಿದ್ದರೆ ನಿಟ್ಟೆ ಪರಿಸರದ ಜನ ಬಾರಾಡಿ ಭಾಗವನ್ನು ಸಂಪರ್ಕಿಸಲು ತೊಂದರೆ ಪಡುವಂತಾಗುತ್ತದೆ.
ಇಲ್ಲಿರುವ ಸೇತುವೆ ನಿರ್ಮಾಣ ಮಾಡಿ ಈಗಾಗಲೇ ಅದೆಷ್ಟೋ ದಶಕಗಳು ಕಳೆದಿವೆ. ಸೇತುವೆಯ ತಳಭಾಗದಲ್ಲಿ ಪಿಲ್ಲರ್‌ಗಳ ಕಲ್ಲುಗಳು ಒಂದೊಂದೆ ಜಾರುತ್ತಿದೆ. ಅಲ್ಲದೆ ಸಿಮೆಂಟ್ ಸ್ಲಾೃಬ್‌ಗಳು ಎಲ್ಲವೂ ಎದ್ದು ತುಕ್ಕುಹಿಡಿದ ಕಬ್ಬಿಣದ ಸರಳುಗಳು ಗೋಚರಿಸುತ್ತಿವೆ. ಸೇತುವೆಯ ಮಧ್ಯದಲ್ಲೇ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದೆ. ಹೀಗಾಗಿ ಇದೇ ಸೇತುವೆಯನ್ನು ಮತ್ತೆ ತೇಪೆ ಹಾಕಿ ನಿರ್ವಹಣೆ ಮಾಡುವ ಬದಲಿಗೆ ಹೊಸ ಸೇತುವೆಯನ್ನೇ ಇಲ್ಲಿ ನಿರ್ಮಾಣ ಮಾಡಲಿ ಎಂದು ಗ್ರಾಮಸ್ಥರು ಬೇಡಿಕೆಯನ್ನಿಟ್ಟಿದ್ದಾರೆ.
ಇಲ್ಲಿನ ಸೇತುವೆಯೂ ಸಂಪೂರ್ಣ ಶಿಥಿಲಗೊಂಡಿದ್ದು, ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಆದರೆ ಇಲ್ಲಿವರೆಗೂ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ಸ್ಪಂದನೆ ಇಲ್ಲ.-ಸುರೇಶ್ ಕುಮಾರ್, ಗ್ರಾಮಸ್ಥರು
ಹಲವು ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆಯಾಗಿದ್ದು, ಸೇತುವೆಯ ಮಧ್ಯದಲ್ಲೇ ಹೊಂಡಗಳು ನಿರ್ಮಾಣವಾಗಿದೆ. ಸಂಪೂರ್ಣ ಶಿಥಿಲಗೊಂಡ ಸೇತುವೆ ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯ ಕಾಡುತ್ತಿದೆ.-ಸುಪ್ರೀತಾ ಪೂಜಾರಿ, ಗ್ರಾಮಸ್ಥರು
ನಾವು ನಿತ್ಯ ಇದೇ ಸೇತುವೆಯನ್ನು ದಾಡಿಕೊಂಡು ಕಾಲೇಜಿಗೆ ಹೋಗುವವರು. ಹೀಗಾಗಿ ಇಲ್ಲೊಂದು ಸುಂದರ ಹೊಸದಾದ ಸೇತುವೆಯ ನಿರ್ಮಾಣದ ಅಗತ್ಯವಿದೆ.-ಪಲ್ಲವಿ ವಿದ್ಯಾರ್ಥಿನಿ.