ಮುಳಬಾಗಿಲು: ಮೂಡಲಬಾಗಿಲಿನ ಮುಕುಟದಂತಿರುವ ಪ್ರಸಿದ್ಧ ಶ್ರೀರಾಮಮಂದಿರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಹನುಮಾನ್ ಸ್ಟೇಡಿಯಂ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ರ್ನಿಲಕ್ಷ$್ಯ ಎದ್ದು ಕಾಣುತ್ತಿದೆ.
1964ರಲ್ಲಿ ಅಂದಿನ ಮೈಸೂರು ಸರ್ಕಾರದ ಕಂದಾಯ ಮತ್ತು ಮುಜರಾಯಿ ಮಂತ್ರಿಯಾಗಿದ್ದ ಮೋತಕಪಲ್ಲಿ ಗ್ರಾಮದ ದಿ.ಎಂ.ವಿ.ಕೃಷ್ಣಪ್ಪ ದೂರದೃಷ್ಟಿಯಿಂದ ನಗರದ ಹೃದಯ ಭಾಗದ ಶ್ರೀರಾಮಮಂದಿರದ ಹಿಂಬದಿಯಲ್ಲಿ ಹನುಮಾನ್ ಸ್ಟೇಡಿಯಂ, ನೆಹರು ಸ್ಮಾರಕ, ಉಚಿತ ವಾಚನಾಲಯ ಮತ್ತು ಪುಸ್ತಕ ಭಂಡಾರ ಹಾಗೂ ಇದರ ಪಕ್ಕದಲ್ಲೇ ಮಕ್ಕಳ ಉದ್ಯಾನವನ ನಿರ್ಮಿಸಿದ್ದರು. ಅಂದಿನ ಕಾಲದಲ್ಲಿ ಶ್ರೀರಾಮಮಂದಿರದಲ್ಲಿ ಮದುವೆ&ಮುಂಜಿ ಸೇರಿದಂತೆ ಶುಭಕಾರ್ಯಗಳನ್ನು ನಡೆಸಲು ಮುಜರಾಯಿ ಇಲಾಖೆ ಮೂಲಕ ತಾಲೂಕು ಆಡಳಿತವು ಬಾಡಿಗೆ ನೀಡುತ್ತಿತ್ತು. ಆದರೆ 1999ರ ನಂತರ ಶ್ರೀರಾಮಮಂದಿರಕ್ಕೆ ತಾಲೂಕು ಕಚೇರಿ ಸ್ಥಳಾಂತರಗೊಂಡ ಬಳಿಕ ಶುಭ ಕಾರ್ಯಗಳಿಗೆ ಬಾಡಿಗೆ ನೀಡುವ ವ್ಯವಸ್ಥೆ ಸ್ಥಗಿತಗೊಂಡಿತು.
2008ರ ಬಳಿಕ ನಿರ್ಲಕ್ಷ್ಯ: ಮುಳಬಾಗಿಲಿನಲ್ಲಿ 2008ರಲ್ಲಿ ಮಿನಿವಿಧಾನಸೌಧ ನಿಮಾರ್ಣಗೊಂಡ ಬಳಿಕ ಶ್ರೀರಾಮಮಂದಿರ ಕಟ್ಟಡದಿಂದ ನೂತನ ಕಟ್ಟಡಕ್ಕೆ ತಾಲೂಕಾಡಳಿತ ಸ್ಥಳಾಂತರಗೊಂಡಿತು. ಇದರಿಂದ ಶ್ರೀರಾಮಮಂದಿರ ರ್ನಿಲಕ್ಷ$್ಯಕ್ಕೆ ಒಳಗಾಗಿ ಅಂದಿನಿಂದ ಒಂದೇ ಒಂದು ಶುಭಕಾರ್ಯ ನಡೆಯದೆ, ಸಮರ್ಪಕ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾಗಿದೆ.
ಮಂದಿರ ಪೂರ್ವಕ್ಕೆ ಪಿಡಬ್ಲೂಡಿ ಇಲಾಖೆ ಮತ್ತು ವಸತಿ ಗೃಹಗಳು, ಪಶ್ಚಿಮಕ್ಕೆ ನೆಹರು ಮಕ್ಕಳ ಉದ್ಯಾನ, ಉತ್ತರಕ್ಕೆ ತಾಲೂಕು ಕಚೇರಿ ಸಂಕೀರ್ಣ, ದಣಕ್ಕೆ ಪುರಾಣ ಪ್ರಸಿದ್ಧ ಅಂಜನೇಯಸ್ವಾಮಿ ದೇವಸ್ಥಾನ ಮತ್ತು ಬಸ್ ನಿಲ್ದಾಣ ಇದ್ದು, ಕೋಟ್ಯಂತರ ರೂಪಾಯಿ ಮೌಲ್ಯವುಳ್ಳ ದೇವಸ್ಥಾನದ ಜಾಗ ಇಂದು ಅನಾಥವಾಗಿದೆ. ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ನಿತ್ಯವೂ ವಿವಿಧ ಕಾರ್ಯಕ್ರಮಗಳು ನಡೆಯುವಂತೆ, ಮತ್ತೆ ವಾದ್ಯಗಳ ನಾದ ಕೇಳಿಸುವಂತೆ ಪುನಶ್ಚೇತನಗೊಳಿಸಿದರೆ ನಗರ ವಾಸಿಗಳಿಗಲ್ಲದೆ ತಾಲೂಕಿನ ಎಲ್ಲ ಜನಸಾಮಾನ್ಯರಿಗೂ ಶುಭ ಕಾರ್ಯ ನಡೆಸಲು ಅನುಕೂಲವಾಗಲಿದೆ. ಅಲ್ಲದೆ ಪ್ರವಾಸಿ ತಾಣವಾಗಿಯೂ ಮಾರ್ಪಡಿಸಿದಂತಾಗುತ್ತದೆ. ಜತೆಗೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ತಂಗಲು ವಸತಿ ವ್ಯವಸ್ಥೆಯನ್ನೂ ಕಲ್ಪಿಸದಂತಾಗುತ್ತದೆ.
ವರ್ಷಕ್ಕೊಮ್ಮೆ ಸ್ವಚ್ಛ: ಹನುಮಾನ್ ಸ್ಟೇಡಿಯಂ ಐದಾರು ದಶಕಗಳ ಹಿಂದೆ ಮುಳಬಾಗಿಲಿನ ದೊಡ್ಡ ಕ್ರೀಡಾಂಗಣ. ಆಂಜನೇಯಸ್ವಾಮಿ ರಥೋತ್ಸವ ಸಮಯದಲ್ಲಿ 2 ದಿನ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ಇದೇ ಸ್ಟೇಡಿಯಂನಲ್ಲಿ ನಡೆಯುತ್ತವೆ. ಈಗಲೂ ಜಾತ್ರೆ ಸಂದರ್ಭದಲ್ಲಿ ಮಾತ್ರ ನಗರಸಭೆಯವರು ಸ್ಟೇಡಿಯಂ ಸ್ವಚ್ಛಗೊಳಿಸುತ್ತಾರೆ. ಪಂದ್ಯಾವಳಿ ಆಯೋಜಿಸಿದ ಬಳಿಕ ಮತ್ತೆ ಮುಂದಿನ ವರ್ಷದ ಜಾತ್ರೆವರೆಗೂ ಇತ್ತ ಕಡೆ ಯಾರೂ ತಿರುಗಿ ನೋಡುವುದಿಲ್ಲ ಎಂಬುದು ಕಹಿ ಸತ್ಯ. ಆದರೆ ಸ್ಥಳಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಟೇಡಿಯಂ ಅಭಿವೃದ್ಧಿಪಡಿಸಿದರೆ ಶಾಲಾ&ಕಾಲೇಜುಗಳ ಕ್ರೀಡಾಕೂಟಗಳು, ಸಭೆ ಸಮಾರಂಭಗಳನ್ನು ಆಯೋಜಿಸಬಹುದು. ಇದರಿಂದ ನೇತಾಜಿ ಕ್ರೀಡಾಂಗಣದ ಮೇಲಿನ ಅವಲಂಬನೆ ಕಡಿಮೆಯಾಗಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳೂ ಸುಗಮವಾಗಿ ನಡೆಯುತ್ತವೆ. ದುಬಾರಿ ಬಾಡಿಗೆ ನೀಡಿ ಖಾಸಗಿ ಭವನಗಳಲ್ಲಿ ಕಾರ್ಯಕ್ರಮ ಆಯೋಜಿಸುವ ತಾಪತ್ರಯವೂ ಕಡಿಮೆಯಾಗಲಿದೆ.
ಅಕ್ರಮ ಚಟುವಟಿಕೆಗಳ ತಾಣ: ಸ್ಟೇಡಿಯಂ ವೇದಿಕೆ ಮೆಟ್ಟಿಲುಗಳ ಸ್ಥಳದಲ್ಲಿ ಆ ಕಾಲದಲ್ಲೇ ಲೋಕಾರ್ಪಣೆಗೊಳಿಸಿದ್ದ ಉಚಿತ ವಾಚನಾಲಯ ಮತ್ತು ಪುಸ್ತಕ ಭಂಡಾರವು ಡಿವಿಜಿ ಗಡಿಭವನದ ಹಿಂಭಾಗಕ್ಕೆ ವರ್ಗಾವಣೆಯಾಗಿದ್ದು, ಶ್ರೀರಾಮಮಂದಿರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಕಚೇರಿ ಸ್ಥಳದಲ್ಲಿ ಭೂಮಾಪನ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ ಈ ಕಚೇರಿಯೂ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡದ ಕಿಟಕಿ ಬಾಗಿಲುಗಳು ಕಳ್ಳ&ಕಾಕರ ಪಾಲಾಗಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಉಚಿತ ಶೌಚಗೃಹವಿದ್ದರೂ ಕೆಲ ಮತಿಗೇಡಿಗಳು ಶ್ರೀರಾಮಮಂದಿರ ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅನೈರ್ಮಲ್ಯ ಉಂಟು ಮಾಡುತ್ತಿದ್ದಾರೆ. ತಾಲೂಕು ಕಚೇರಿಗೆ ಬರುವ ಸಾರ್ವಜನಿಕರು ಮಧ್ಯಾಹ್ನದ ವೇಳೆ ಹನುಮಾನ್ ಸ್ಟೇಡಿಯಂ ಬಳಿ ಇರುವ ಬೃಹತ್ ಮರದ ಕಟ್ಟೆಯ ಮೇಲೆ ವಿಶ್ರಾಂತಿ ಪಡೆಯುತ್ತಾರೆ. ಪೂರ್ವಭಾಗದ ಖಾಸಗಿ ಕಟ್ಟಡದಿಂದ ಶೌಚಗೃಹದ ತ್ಯಾಜ್ಯ ತೆರೆದ ಗುಂಡಿಯಲ್ಲಿ ಶೇಖರಣೆಗೊಳ್ಳುತ್ತಿದ್ದು, ಮರದ ಕೆಳಗೆ ಕೂರುವ ನಾಗರಿಕರು ದುರ್ವಾಸನೆಯಲ್ಲೇ ಕಾಲಕಳೆಯಬೇಕಾಗಿದೆ.
ಟೆಂಡರ್ ಪ್ರಕ್ರಿಯೆಗೆ ಗ್ರಹಣ: ಸ್ಟೇಡಿಯಂ ಮತ್ತು ಶ್ರೀರಾಮಮಂದಿರ ಪಶ್ಚಿಮಕ್ಕೆ ಇರುವ ಮಕ್ಕಳ ಉದ್ಯಾನವನವನ್ನು ಹಿಂದಿನ ಶಾಸಕ ಎಚ್.ನಾಗೇಶ್ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅಕರ್ಷಣೀಯವಾಗಿದೆ. ಆದರೆ ಶ್ರೀರಾಮಮಂದಿರ ಹಾಗೂ ಹನುಮಾನ್ ಸ್ಟೇಡಿಯಂ ನವೀಕರಣಕ್ಕೆ ನಗರೋತ್ಥಾನ ನಿಧಿಯಲ್ಲಿ 70 ಲಕ್ಷ ರೂ.ಅನುದಾನ ಮೀಸಲಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲೇ ಕಾಮಗಾರಿಗೆ ಗ್ರಹಣ ಹಿಡಿದಿದೆ. ಹಾಗಾಗಿ ಕೂಡಲೇ ಸಮಸ್ಯೆ ಬಗೆಹರಿಸಿ ಟೆಂಡರ್ ಕರೆದು ಶ್ರೀರಾಮಮಂದಿರ ಮತ್ತು ಹನುಮಾನ್ ಸ್ಟೇಡಿಯಂ ಅಭಿವೃದ್ಧಿಗೊಳಿಸಬೇಕು. ವಾಚನಾಲಯ ಸ್ಥಳವನ್ನು ದುರಸ್ತಿಪಡಿಸಿ, ಕ್ರೀಡಾ ಇಲಾಖೆ ಅಥವಾ ಯಾವುದಾದರೂ ಸರ್ಕಾರಿ ಇಲಾಖೆಯ ಕಚೇರಿ ತೆರೆದರೆ ಸ್ಥಳದ ನಿರ್ವಹಣೆ ಸಮರ್ಪಕವಾಗಲಿದೆ.
ಶ್ರೀರಾಮಂದಿರ ಮತ್ತು ಹನುಮಾನ್ ಸ್ಟೇಡಿಯಂನ ಸಮಸ್ಯೆಗಳು ಗಮನಕ್ಕೆ ಬಂದಿದೆ. ಈ ಬಗ್ಗೆ ತಕ್ಷಣವೇ ಕ್ರಮವಹಿಸಿ ಅಭಿವೃದ್ಧಿಪಡಿಸಿ ತಾಲೂಕಿನ ಜನರ ಸದುಪಯೋಗಕ್ಕೆ ಬರುವಂತೆ ಮಾಡಲಾಗುವುದು. | ಸಮೃದ್ಧಿ ವಿ.ಮಂಜುನಾಥ್, ಶಾಸಕ ಮುಳಬಾಗಿಲು
ಮುಜರಾಯಿ ಇಲಾಖೆ ಅಧಿಕಾರಿಗಳಿಂದ ಶ್ರೀರಾಮಮಂದಿರ ಅಭಿವೃದ್ಧಿ ಸಂಬಂಧಿತ ಮಾಹಿತಿ ತರಿಸಿಕೊಂಡು ಸರಿಪಡಿಸುವ ಕಾರ್ಯ ಮಾಡಲಾಗುವುದು. ನಗರಸಭೆ ಸೇರಿದಂತೆ ಯಾವ ಇಲಾಖೆಯಿಂದ ನಿರ್ವಹಣೆ ಮಾಡಬೇಕೆಂಬುದನ್ನು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತಕ್ಷಣವೇ ಕ್ರಮವಹಿಸಲಾಗುವುದು. ಟಿ.ರೇಖಾ ಗ್ರೇಡ್-&1 ತಹಸೀಲ್ದಾರ್, ಮುಳಬಾಗಿಲು
ಶ್ರೀರಾಮಮಂದಿರ ಮತ್ತು ಸ್ಟೇಡಿಯಂ ಅಭಿವೃದ್ಧಿಗೆ ನಗರಸಭೆಯಿಂದ 70 ಲಕ್ಷ ರೂ.ಅನುದಾನ ಮೀಸಲಿರಿಸಿದ್ದು, ಚುನಾವಣೆ ನಂತರ ಈ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಿಲ್ಲ. ತಕ್ಷಣವೇ ಕ್ರಮವಹಿಸಲಾಗುವುದು. ವಿ.ಶ್ರೀಧರ್, ಪೌರಾಯುಕ್ತ, ನಗರಸಭೆ ಮುಳಬಾಗಿಲು
ಹಿಂದೆ ದೂರದೃಷ್ಟಿ ನಾಯಕರು ರಾಜಕಾರಣದಲ್ಲಿ ಇರುತ್ತಿದ್ದರು. ಆದರೆ ಜನರಿಗೆ ಏನು ನೀಡಬೇಕು ಎಂಬುದರ ಬಗ್ಗೆ ಸದ್ಯದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮಾಹಿತಿಯೇ ಇಲ್ಲವಾಗಿದೆ. ಶ್ರೀರಾಮಮಂದಿರ ನಿರ್ವಹಣೆ ಮುಜರಾಯಿ ಮತ್ತು ತಹಸೀಲ್ದಾರ್ ಇಲಾಖೆಗೆ ನೀಡುವ ಬದಲು ಪಿಡಬ್ಲೂಡಿ ಇಲಾಖೆಗೆ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಎಂ.ವಿ.ಜಗದೀಶ್, ಪ್ರಥಮ ದರ್ಜೆ ಗುತ್ತಿಗೆದಾರ, ಮೋಕತಪಲ್ಲಿ