ಗಂಗಾಧರ್ ಬೈರಾಪಟ್ಟಣ, ರಾಮನಗರ
ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಬರುವ ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಇ-ಪೇ ಶೌಚ್ಯಗೃಹಗಳು(ಎಲೆಕ್ಟ್ರಾನಿಕ್ಸ್ ಪೇ ಟಾಯ್ಲೆಟ್ಸ್) ದುರಸ್ತಿ ಕಾಣದೆ ಕೆಟ್ಟ ನಿಂತಿದ್ದು, ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯೊಂದು ಒಂದೇ ವರ್ಷದಲ್ಲಿ ವಿವಿಧ ಕಾರಣಗಳಿಂದ ವಿಫಲವಾಗಿದೆ.
ಸರ್ಕಾರಿ ಕಚೇರಿ ಕೆಲಸ ಸೇರಿದಂತೆ ವಿವಿಧ ಕಾರಣಗಳಿಂದ ನಗರ ಪ್ರದೇಶಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇ-ಪೇ ಶೌಚಗೃಹಗಳನ್ನು ನಿರ್ಮಿಸಲಾಗಿತ್ತು.
ಜಿಲ್ಲಾ ಕೇಂದ್ರ ರಾಮನಗರ, ಕನಕಪುರದಲ್ಲಿ 2015-16 ಮತ್ತು 16-17ನೇ ಸಾಲಿನಲ್ಲಿ ಮತ್ತು ಮಾಗಡಿಯಲ್ಲಿ ಇತ್ತೀಚಿಗೆ ಎರಡು ಇ.ಪೇ ಶೌಚಗೃಹಗಳನ್ನು ಸ್ಥಾಪಿಸಲಾಗಿತ್ತು. ರಾಮನಗರದ ಛತ್ರದ ಬೀದಿ, ರಾಯರದೊಡ್ಡಿ, ಜಾಲಮಂಗಲ ರಸ್ತೆ, ಗೌಸಿಯಾ ಕಾಲೇಜು ಬಳಿ ಹಾಗೂ ರೋಟರಿ ವೃತ್ತದಲ್ಲಿ, ಕನಕಪುರದ ಅಯ್ಯಪ್ಪ ಸ್ವಾಮಿ ದೇವಾಲಯ, ಬಸ್ ನಿಲ್ದಾಣ ವೃತ್ತ, ಕೆಎನ್‌ಎಸ್ ವೃತ್ತದ ಬಳಿ, ರೇಷ್ಮೆ ಮಾರುಕಟ್ಟೆ ಹಾಗೂ ತಾಲೂಕು ಕ್ರೀಡಾಂಗಣದ ಬಳಿ, ಮಾಗಡಿಯ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿ ಮುಂಭಾಗ ಈ ಶೌಚಗೃಹಗಳನ್ನು ನಿರ್ಮಿಸಲಾಗಿದ್ದು, ಎಲ್ಲವೂ ಕೆಟ್ಟು ನಿಂತಿದ್ದು, ದುರಸ್ತಿಗೆ ಕಾಯುತ್ತಿವೆ.
ನಗರದ ಪ್ರದೇಶದಲ್ಲಿ ಶೌಚಾಲಯಗಳ ಕೊರತೆಯನ್ನು ಮನಗಂಡು ಅಲ್ಲಲ್ಲಿ ಪ್ರತಿ ಘಟಕಕ್ಕೆ ಸರಾಸರಿ 5.5 ಲಕ್ಷ ರೂ. ವೆಚ್ಚದಲ್ಲಿ ಇ.ಪೇ-ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಎಲ್ಲವೂ ಸೆನ್ಸಾರ್ ಆಧಾರಿತವಾಗಿಯೇ ಕಾರ್ಯನಿರ್ವಹಿಸುವ ಇವುಗಳನ್ನು ಕಾಯಿನ್ ಹಾಕುವ ಮೂಲಕ ಬಳಕೆ ಮಾಡಬಹುದಾಗಿತ್ತು. ಯೋಜನೆ ಜಾರಿಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದು. ಸಾರ್ವಜನಿಕರಿಂದ ಪ್ರಶಂಸೆಯೂ ವ್ಯಕ್ತವಾಗಿತ್ತು.
ಆದರೆ ಒಂದೇ ವರ್ಷದಲ್ಲಿ ಯೋಜನೆ ಬಂಡವಾಳ ಬಯಲಾಗಿದೆ. ನಿರ್ಮಾಣದ ಗುತ್ತಿಗೆ ಪಡೆದಿದ್ದ ಕಂಪನಿ, ಒಂದು ವರ್ಷದ ನಿರ್ವಹಣೆ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಕೈ ತೊಳೆದುಕೊಂಡಿದೆ. ಈಗ ಕೆಟ್ಟು ನಿಂತಿರುವ ಶೌಚಗೃಹಗಳ ದುರಸ್ತಿ ಜವಾಬ್ದಾರಿ ನಗರಸಭೆ ಹೆಗಲಿಗೆ ಬಿದ್ದಿದೆ. ಆದರೆ ನಿರ್ವಹಣೆ ಮಾಡಲು ಯಾವುದೇ ಸಂಸ್ಥೆ ಮುಂದಾಗದ ಕಾರಣ ಸ್ಥಳೀಯ ಸಂಸ್ಥೆಗಳು ಸಹ ಕೈಕಟ್ಟಿ ಕುಳಿತಿವೆ. ಕಳೆದ 5-6 ವರ್ಷಗಳಿಂದಲೂ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತಿದ್ದೂ, ಈವರೆಗೂ ಒಂದೇ ಒಂದು ಸಂಸ್ಥೆ ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ರಾಮನಗರದಲ್ಲಿ ಇ.ಪಿ ಶೌಚಗೃಹಗಳು ಕೈಕೊಟ್ಟ ಕಾರಣ ನಗರದ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಶೌಚಗೃಹಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಸುಮಾರು 63 ಲಕ್ಷ ರೂ.ವೆಚ್ಚದಲ್ಲಿ ಇವು ನಿರ್ಮಾಣವಾಗಲಿದ್ದು, ಟೆಂಡರ್ ಹಂತದಲ್ಲಿದೆ. ಇವುಗಳಲ್ಲಿ ಶೇ.50 ಮಹಿಳೆಯರ ಬಳಕೆಗಾಗಿ ನಿರ್ಮಾಣ ಮಾಡಲಾಗುತ್ತಿರುವುದು ವಿಶೇಷ. ಉಳಿದಂತೆ ಮಾಗಡಿ, ಕನಕಪುರ, ಚನ್ನಪಟ್ಟಣದಲ್ಲಿ ಇರುವ ಸುಲಭ ಶೌಚಗೃಹಗಳನ್ನೇ ಸಾರ್ವಜನಿಕರು ಬಳಕೆ ಮಾಡಬೇಕಿದೆ.
ಇದು ಕೇವಲ ರಾಮನಗರ ಜಿಲ್ಲೆಯ ಅವ್ಯವಸ್ಥೆ ಮಾತ್ರವಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ಇದೆ ಪರಿಸ್ಥಿತಿ ಇದೆ. ಬೆಂಗಳೂರು ನಗರದಲ್ಲಿಯೂ ಸಹ ಇ-ಪೇ ಶೌಚಗೃಹಗಳು ನಿರ್ವಹಣೆ ಇಲ್ಲದೆ, ಬಳಕೆ ಆಗುತ್ತಿಲ್ಲ ಎನ್ನುವ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದರು.
ನಿರ್ವಹಣೆ ಇಲ್ಲದೆ ಶೌಚಗೃಹಗಳು ಬಳಕೆಯಾಗುತ್ತಿಲ್ಲ. ಇದಕ್ಕಾಗಿ ಟೆಂಡರ್ ಕರೆದರೂ ಯಾರೂ ಮುಂದೆ ಬರುತ್ತಿಲ್ಲ. ಆದರೆ ರಾಮನಗರದಲ್ಲಿ 63 ಲಕ್ಷ ರೂ.ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.ಎಲ್.ನಾಗೇಶ್, ಆಯುಕ್ತರು, ರಾಮನಗರ ನಗರಸಭೆ
ಇ-ಪೇ ಶೌಚಗೃಹಗಳು ಇದ್ದೂ ಇಲ್ಲದಂತಾಗಿವೆ. ಇವುಗಳ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಬೇಕು.
ಸಿದ್ದರಾಜು, ಸಾರ್ವಜನಿಕ ರಾಮನಗರ
* ರಾಮನಗರ ಮತ್ತು ಕನಕಪುರದಲ್ಲಿ ತಲಾ 5 ಕಡೆ ಹಾಗೂ ಮಾಗಡಿಯಲ್ಲಿ ಎರಡು ಸ್ಥಳದಲ್ಲಿ ಇ-ಪೇ ಶೌಚಗೃಹಗಳ ನಿರ್ಮಾಣ* ಪ್ರತಿ ಶೌಚಗೃಹಕ್ಕೆ ತಲಾ 5.5ರಂತೆ ಒಟ್ಟು ಸುಮಾರು 66 ಲಕ್ಷ ರೂ. ವೆಚ್ಚ* ಕೆಟ್ಟು ನಿಂತು 5 ವರ್ಷಗಳೇ ಕಳೆದಿವೆ* ನಿರ್ವಹಣೆಗೆ ಮುಂದೆ ಬಾರದ ಸಂಸ್ಥೆಗಳು* ಟೆಂಡರ್ ಕರೆದುಕರೆದೂ ಸುಸ್ತಾದ ಸ್ಥಳೀಯ ಸಂಸ್ಥೆಗಳು