ಮಾನ್ವಿ: ಕುಡಿವ ನೀರು ಹಾಗೂ ಅಗತ್ಯ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಗವಿಗಟ್ಟು ಗ್ರಾಮಸ್ಥರು ಗುರುವಾರ ತಾಪಂ ಇಒ ಖಲೀಲ್ ಆಹ್ಮದ್‌ಗೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಎರಡು ವಾರ್ಡ್‌ಗಳಿದ್ದು, ಮೂಲಸೌಕರ್ಯ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜಾನೇಕಲ್ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಎರಡು ಕುಡಿವ ನೀರಿನ ಟ್ಯಾಂಕ್ ಇದ್ದರೂ ನೀರು ಬರುತ್ತಿಲ್ಲ. ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಹಾಳಾಗಿದ್ದು, ರಸ್ತೆ ಮೇಲೆ ನೀರು ಹರಿಯುವುದರಿಂದ ಮಾರಕ ಕಾಯಿಲೆಗಳ ಭೀತಿ ಉಂಟಾಗಿದೆ. ಸರ್ಕಾರಿ ಹಿಪ್ರಾ ಶಾಲೆಯ ಬಿಸಿಯೂಟದ ಕೊಠಡಿ ಶಿಥಿಲಗೊಂಡು ಬೀಳುವ ಹಂತದಲ್ಲಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಕೂಡಲೇ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.