ಜಿಲ್ಲೆ

ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ; ವೃತ್ತಿ ಮಾರ್ಗದರ್ಶನ, ಕೌಶಲ್ಯ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲೇ ಅತ್ಯುತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಪಾಠ ಮಾಡುವ ಪವಿತ್ರ ಕೆಲಸವನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಬೇಕು. ವಿವಿಧ ಕಂಪನಿಗಳ ಸಹಯೋಗದೊಂದಿಗೆ ಬೆಳಗಾವಿ, ಕಲಬುರಗಿ ವಿಭಾಗಗಳ 2,400 ಸರ್ಕಾರಿ ಪ್ರೌಢಶಾಲೆಗಳಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಐಸಿಟಿ ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ದಿಕ್ಸೂಚಿ- 2024: ವೃತ್ತಿ ಮಾರ್ಗದರ್ಶನ ಮತ್ತು ಐಸಿಟಿ ಕೌಶಲ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ತಂದೆ ಎಸ್. ಬಂಗಾರಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರ ನೇಮಕಾತಿ ನಡೆಸಿ ಕೊರತೆಯನ್ನು ನೀಗಿಸಲಾಗಿದೆ. ಇದೀಗ ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ 16 ಜಿಲ್ಲೆಗಳ 2,400 ಸರ್ಕಾರಿ ಪ್ರೌಢಶಾಲೆಗಳ 6,000ಕ್ಕೂ ಹೆಚ್ಚು ಶಿಕ್ಷಕರು ಮತ್ತು 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಐಸಿಟಿ (ಮಾಹಿತಿ ಮತ್ತು ಸಂವನ ತಂತ್ರಜ್ಞಾನ) ತರಬೇತಿ ಸಿಗಲಿದೆ. ವಿವಿಧ ಕಂಪನಿಗಳು ಸಿಎಸ್‌ಆರ್ ನೆರವು ನೀಡಲು ಕೈ ಜೋಡಿಸಿರುವುದು ಶ್ಲಾಘನೀಯ. ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ಇದೇವೇಳೆ ಸಚಿವ ಮಧು ಬಂಗಾರಪ್ಪ ಯೋಜನೆಯ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬೆಳಗಾವಿ ವಲಯದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಸ್ವಾಗತಿಸಿದರು. ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ಐಎಲ್‌ಪಿ) ಕಾರ್ಯದರ್ಶಿ ಪ್ರಮೋದ ಶ್ರೀಧರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಪ್ರಭು ಮಟ್ಟಿ, ವೆಂಕಟೇಶಕುಮಾರ, ನಂಜಯ್ಯ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಇತರರಿದ್ದರು.