ಜಿಲ್ಲೆ

ಭಿನ್ನಮತ ಶಮನಕ್ಕೆ ಡಿಕೆಶಿ ಮುಲಾಮು; ಕೆ.ಎಚ್.ಮುನಿಯಪ್ಪ, ಕೆ.ಆರ್.ರಮೇಶ್‌ಕುಮಾರ್ ನಡುವೆ ರಾಜಿಗೆ ಯತ್ನ

Kolar

ಪಾ.ಶ್ರೀ.ಅನಂತರಾಮ್ ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಅಡ್ಡಿಯಾಗಿರುವ ಭಿನ್ನಮತ ಶಮನಕ್ಕೆ ಜುಲೈ 2ರ ನಂತರ ಕೋಲಾರಕ್ಕೆ ಭೇಟಿ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಶಾಸಕ ಕೆ.ಆರ್.ರಮೇಶ್‌ಕುಮಾರ್ ನಡುವಿನ ಭಿನ್ನಮತಕ್ಕೆ ಮುಲಾಮು ಹಚ್ಚಿ ವರ್ಚಸ್ಸು ಹೆಚ್ಚಿಸಿಕೊಳ್ಳುವುದು ಡಿಕೆಶಿಯ ಪ್ಲಾನ್ ಎನ್ನಲಾಗಿದೆ.

ಪಕ್ಷದ ಚಿಹ್ನೆಯಡಿ ಗೆದ್ದಿರುವ 4 ಶಾಸಕರಿದ್ದರೂ ಭಿನ್ನಮತ ಹಾಗೂ ಸಮರ್ಥ ನಾಯಕತ್ವವಿಲ್ಲದೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದೇವೆ. ಗ್ರಾಪಂ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕಾದರೆ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ರಾಜಕೀಯ ಗುರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮಾದರಿಯಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿಯೊಂದಿಗೆ ಕೋಲಾರದಿಂದ ಮತ್ತೊಂದು ಪಾಂಚಜನ್ಯ ಯಾತ್ರೆ ಆರಂಭಿಸಲು ಉದ್ದೇಶಿಸಿರುವ ಡಿಕೆಶಿ, ಕಳೆದ ವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರೊಂದಿಗೆ ಪಕ್ಷ ಸಂಘಟನೆ ವಿಚಾರವಾಗಿ ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗೆ 3 ವರ್ಷವಿದೆ, ಬಿಜೆಪಿ ತನ್ನ ಅವಧಿ ಮುಗಿಸುತ್ತದೋ ಇಲ್ಲವೋ ಗೊತ್ತಿಲ್ಲ, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಸರಿಯಲ್ಲ, ಗ್ರಾಪಂ ಚುನಾವಣೆಯಲ್ಲಿ ಬಹುಮತ ಸಿಗದಿದ್ದರೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಗೊಳಿಸಲು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನಿಮ್ಮ ಹಂತದಲ್ಲೇ ಭಿನ್ನಮತ ಶಮನ ಮಾಡಲು ಯತ್ನಿಸಿ, ಜು.2ರಂದು ನಡೆಯಲಿರುವ ನನ್ನ ಪದಗ್ರಹಣ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿಸಲು ಮಾಜಿ ಸಂಸದ ಮುನಿಯಪ್ಪ, ಶಾಸಕ ರಮೇಶ್‌ಕುಮಾರ್ ಅವರನ್ನು ಒಂದಾಗಿಸಿ ಹೊಸ ಪರ್ವಕ್ಕೆ ಮುನ್ನುಡಿ ಬರೆಯಿರಿ ಎಂದು ತಾಕೀತು ಮಾಡಿದ್ದಾರೆಂದು ತಿಳಿದುಬಂದಿದೆ.

ಮುನಿಯಪ್ಪ ಹಾಗೂ ರಮೇಶ್‌ಕುಮಾರ್ ಸರಿ ಹೋದರೆ ಜಿಲ್ಲೆಯಲ್ಲಿ ಕೈಬಲ ಹೆಚ್ಚುತ್ತದೆ, ಇವರಿಬ್ಬರು ಒಂದಾದರೆ ಉಳಿದವರು ತಮ್ಮ ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಸುಲಭವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಮುಂದುವರಿದ ಪ್ರಯತ್ನ: ಡಿ.ಕೆ.ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಚಂದ್ರಾರೆಡ್ಡಿ ಅವರು ಪಕ್ಷದ ಕಾರ್ಯಕ್ರಮಗಳಿಂದ ದೂರವಿದ್ದ ರಮೇಶ್‌ಕುಮಾರ್ ಅವರನ್ನು ಶುಕ್ರವಾರ ನಡೆದ ವೀರಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಫಲರಾಗಿದ್ದು, ಮುನಿಯಪ್ಪ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಒಗ್ಗೂಡಿಸುವ ಅವಕಾಶ ತಪ್ಪಿದ್ದು, ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಸಂಘಟನೆ ವಿಚಾರದಲ್ಲಿ ಚಂದ್ರಾರೆಡ್ಡಿಗೆ ಏನು ಹೇಳಬೇಕೋ ಅದನ್ನು ಹೇಳಿರುವ ಡಿಕೆಶಿ ಅವರು ರಮೇಶ್‌ಕುಮಾರ್ ಜತೆಯೂ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಆಷಾಢ ಮಾಸದ ನಂತರ ಏನಾಗುತ್ತದೋ ಕಾದು ನೋಡಬೇಕಿದೆ.

ಬದ್ಧತೆ ಇಲ್ಲದವರಿಗೆ ಗೇಟ್ ಪಾಸ್: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲೇಬೇಕು, ಜಿಲ್ಲೆಯ 6 ಕ್ಷೇತ್ರಗಳಲ್ಲೂ ಗೆಲ್ಲಬೇಕು, ಜಿಲ್ಲೆಯ ಮುಖಂಡರಿಗೆ ಕಾಂಗ್ರೆಸ್ ಬಗ್ಗೆ ಪ್ರೀತಿ, ವಿಶ್ವಾಸವಿದ್ದರೆ 3 ವರ್ಷ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಬೇಕು, ಯಾರಲ್ಲಿ ಬದ್ಧತೆ ಇಲ್ಲವೋ ಅಂತಹವರಿಗೆ ಗೇಟ್ ಪಾಸ್ ಖಚಿತ ಎಂದು ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಎಲ್ಲಾ ಮುಖಂಡರನ್ನು ಒಗ್ಗೂಡಿಸಿ, ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ, ಮಾಜಿ ಸಂಸದ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಅವರ ನಡುವೆ ಉಂಟಾಗಿರುವ ಭಿನ್ನಮತ ಶಮನಕ್ಕೆ ಪ್ರಯತ್ನ ನಡೆಯುತ್ತಿದೆ, ಜು.2ರ ನಂತರ ನಮ್ಮ ರಾಜ್ಯಾಧ್ಯಕ್ಷರು ಜಿಲ್ಲೆಗೆ ಭೇಟಿ ನೀಡಲಿದ್ದು, ಪಕ್ಷವನ್ನು ಇನ್ನಷ್ಟು ಸದೃಢವಾಗಿ ಬೆಳೆಸುತ್ತೇವೆ. ಕೆ.ಚಂದ್ರಾರೆಡ್ಡಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ