ಹಾಸನ: ಹಾಸನಾಂಬೆ ಸಾರ್ವಜನಿಕ ದರ್ಶನದ ನಾಲ್ಕನೇ ದಿನವಾದ ಸೋಮವಾರ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಆಗಮಿಸಿತ್ತು. ಧರ್ಮದರ್ಶನ ಸೇರಿದಂತೆ ಎಲ್ಲ ಸಾಲುಗಳು ಕಿಕ್ಕಿರಿದು ತುಂಬಿದ್ದವು.
ಮುಂಜಾನೆಯಿಂದಲೇ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಮಾಜಿ ಸಚಿವ ಎಚ್.ಡಿ.ರೇವಣ್ಣ ದಂಪತಿ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮತ್ತವರ ಕುಟುಂಬ, ನಟಿ ತಾರಾ ಮೊದಲಾದವರು ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಉಳಿದಂತೆ ನಾಲ್ಕನೇ ದಿನವೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬೆಳಗ್ಗೆಯಿಂದಲೇ ಧರ್ಮದರ್ಶನ ಹಾಗೂ 300 ರೂ. ಟಿಕೆಟ್ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ಮುಂಜಾನೆ 4 ಗಂಟೆಯಿಂದಲೇ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಗಣ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು.
ಬೆಳಗ್ಗೆ 5 ಗಂಟೆಯಿಂದ ದೇವಿ ದರ್ಶನ ಆರಂಭವಾಯಿತು. 1000 ರೂ. ವಿಶೇಷ ದರ್ಶನದ ಸಾಲುಗಳಲ್ಲಿ ಭಕ್ತರ ಸಂಖ್ಯೆ ತುಸು ಕಡಿಮೆ ಇತ್ತು. ನೈವೇದ್ಯ ಹಿನ್ನೆಲೆ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನ ಇತ್ತು. ನಂತರ ಮಧ್ಯಾಹ್ನ 3.30 ರ ನಂತರ ದರ್ಶನ ಪ್ರಾರಂಭವಾಯಿತು.