ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಾನು ಕಂಡ ಸಜ್ಜನ ರಾಜಕಾರಣಿಯಾಗಿದ್ದ ಎಸ್.ಎಂ.ಕೃಷ್ಣ ರಾಜಕೀಯ ಮುತ್ಸದಿ ಪದಕ್ಕೆ ನಿಜ ಅನ್ವರ್ಥವಾಗಿ ಬದುಕಿದ್ದರು. ರಾಜಕೀಯದಲ್ಲಿ ಟೀಕೆಗಳು ಬಂದಾಗ ಅವುಗಳನ್ನು ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು. ಆಡಳಿತದ ಅವಧಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಅವರ ರಾಜಕೀಯ ಜೀವನ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ.
ಅವರ ಉಡುಗೆ ತೊಡುಗೆ, ಅವರ ಭಾಷಾ ಶುದ್ಧತೆ, ಊಟದ ಪ್ರೀತಿ ಎಲ್ಲವೂ ಚೆಂದ. ನನ್ನ ರಾಜಕೀಯ ಜೀವನದಲ್ಲಿ ಅವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವನಾಗಿದ್ದ ದಿನಗಳು ಅತ್ಯಂತ ಅಮೂಲ್ಯ ಘಳಿಗೆಗಳು. ರಾಜಕಾರಣಿಗಳು ತಮ್ಮ ಕಾಲದಲ್ಲಿ ಮಾಡಿದ ಕೆಲಸಗಳನ್ನು ಅವರೇ ಹೇಳಿ ಕೊಳ್ಳಬೇಕಾದ ಕಾಲಘಟ್ಟದಲ್ಲಿ ಜನರೇ ಪಕ್ಷಾತೀತ, ಜ್ಯಾತ್ಯತೀತವಾಗಿ ಎಸ್.ಎಂ. ಕೃಷ್ಣ ಆಡಳಿತ ಕಾಲದ ಸಾಧನೆಗಳನ್ನು ಸ್ಮರಿಸುತ್ತಿರುವುದು ಅವರಿಗೆ ಸಿಕ್ಕ ಬಹುದೊಡ್ಡ ಗೌರವವೇ ಸರಿ ಎಂದು ಬಣ್ಣಿಸಿದ್ದಾರೆ.