ಮಡಿಕೇರಿ: ಕಂದಾಯ ಇಲಾಖೆಯಲ್ಲಿನ ಹಳೆಯ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಸರ್ಕಾರದ ಮಹತ್ವಕಾಂಕ್ಷೆಯ ಭೂಸುರಕ್ಷಾ ಯೋಜನೆಗೆ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕು ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರ ಕಡತಗಳ ಡಿಜಿಟಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಕಂದಾಯ ಇಲಾಖೆಯಲ್ಲಿನ ಹಳೆಯ ದಾಖಲೆಗಳು ಶಿಥಿಲಾವಸ್ಥೆ ತಲುಪಿವೆ. ದಾಖಲೆ ಪಡೆಯಲು ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಆ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಮತ್ತು ನಕಲಿ ಸೃಷ್ಟಿ ತಡೆಯಲು ಜಿಲ್ಲೆಯಲ್ಲಿ ಪ್ರಥಮ ಹಂತವಾಗಿ ಚನ್ನರಾಯಪಟ್ಟಣದಲ್ಲಿ ಯೋಜನೆಗೆ ಚಾಲನೆ ಕೊಡಲಾಗುತ್ತಿದೆ. ಎಲ್ಲ ದಾಖಲೆಗಳನ್ನು 100 ದಿನಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದರು.
ನಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಹಸೀಲ್ದಾರ್, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿನ ಹೆಚ್ಚಿನ ಪ್ರಕರಣ ಬಾಕಿ ಇದ್ದವು. ಈಗ ತ್ವರಿತವಾಗಿ 700 ಪ್ರಕರಣ ಇತ್ಯರ್ಥ ಮಾಡಲಾಗಿದೆ. ತಹಸೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು 60 ದಿನಗಳಲ್ಲಿ ಬಗೆಹರಿಸಲಾಗುತ್ತಿದೆ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿ ದೀರ್ಘಾವಧಿಯ ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಂದಾಯ ಇಲಾಖೆಯಲ್ಲಿನ ಪಹಣಿ, ಮ್ಯುಟೇಷನ್, ಭೂ ಮಂಜೂರಾತಿ, ಸಾಗುವಳಿ ಚೀಟಿ ಮತ್ತಿತರ ದಾಖಲೆಗಳನ್ನು ಪಡೆಯಲು ರೈತರು ಹಾಗೂ ಜನಸಾಮಾನ್ಯರು ಅಲೆದಾಡುವುದನ್ನು ತಪ್ಪಿಸಲು ಭೂಸುರಕ್ಷಾ ಯೋಜನೆ ಸಹಕಾರಿ ಆಗಲಿದೆ. ರೆಕಾರ್ಡ್ ರೂಂನ ಉನ್ನತೀಕರಣಕ್ಕೆ ಜಿಲ್ಲಾಧಿಕಾರಿ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.
100 ದಿನಗಳಲ್ಲಿ 10 ಡಾಟಾ ಆಪರೇಟರ್‌ಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿರುವ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪಿ.ಡಿ.ಎಫ್. ಸ್ವರೂಪಕ್ಕೆ ತಂದು ರಕ್ಷಿಸಲಾಗುವುದು. ಶಾಶ್ವತವಾದ ಆಧುನಿಕ ವ್ಯವಸ್ಥೆಗೆ ಸರ್ಕಾರ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಅಪಾರ ಜಿಲ್ಲಾಧಿಕಾರಿ ಶಾಂತಲಾ, ತಹಸೀಲ್ದಾರ್ ಬಿ.ಎಮ್.ಗೋವಿಂದರಾಜು, ಗ್ರೇಡ್-2 ತಹಸೀಲ್ದಾರ್ ನಾಗರಾಜು, ಶಿರಸ್ತೆದಾರರಾದ ಪವನ್, ರವಿಕುಮಾರ್, ಗಿರೀಶ್ ಬಾಬು, ಎಸ್,ಪೂರ್ಣಿಮಾ, ಕಸಬಾ ರಾಜಸ್ವ ನಿರೀಕ್ಷಕರಾದ ಮಂಜುನಾಥ್, ಲೋಕೇಶ್, ನಟರಾಜ್, ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.