ಮೈಸೂರು: ಬರೋಬ್ಬರಿ 1.20 ಕೋಟಿ ಪುಟಗಳಷ್ಟು ಪುರಾತನ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅವುಗಳನ್ನು ರಾಜ್ಯ ಪತ್ರಾಗಾರ ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ ಎಂದು ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಹೇಳಿದರು.
ರಾಜ್ಯ ಪತ್ರಾಗಾರ ಇಲಾಖೆ-50 ಮತ್ತು ಕರ್ನಾಟಕ ನಾಮಕರಣ-50ರ ಸಂಭ್ರಮದ ಮಹೋತ್ಸವ ಅಂಗವಾಗಿ ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಕರ್ನಾಟಕ ಏಕೀಕರಣ ಮತ್ತು ಕನ್ನಡ ಅಸ್ಮಿತೆ’ ಕುರಿತು ವಿಚಾರಸಂಕಿರಣ, ಚಾರಿತ್ರಿಕ ದಾಖಲೆಗಳ ಮತ್ತು ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಪುರಾತನ, ಐತಿಹಾಸಿಕ ಲಕ್ಷಾಂತರ ದಾಖಲೆಗಳಿವೆ. ಮೈಸೂರು ಅರಮನೆಗೆ ಸಂಬಂಧಿಸಿದ 11 ಸಾವಿರ ದಾಖಲೆಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಾಗಾರ ಇಲಾಖೆ ಬಹಳಷ್ಟು ಜನರಿಗೆ ಪರಿಚಯ ಇಲ್ಲ. ಇದು ಐತಿಹಾಸಿಕ ದಾಖಲೆಗಳು, ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಗಣ್ಯವ್ಯಕ್ತಿಗಳ ಧ್ವನಿ ಇತಿಹಾಸ, ಛಾಯಾಚಿತ್ರಗಳು, ಕಾಗದ-ಪತ್ರಗಳು, ದಿನಪತ್ರಿಕೆಗಳು, ಹಸ್ತಪ್ರತಿಗಳು, ಕಡತ ಸಂರಕ್ಷಣೆ ಮಾಡಿದೆ. ಮೈಸೂರು ಒಡೆಯರ ಆಡಳಿತದ ಅವಧಿಯ ದಾಖಲೆಗಳನ್ನೂ ಒಳಗೊಂಡಂತೆ ಪ್ರಸ್ತುತ ಸರ್ಕಾರದ ದಾಖಲೆಗಳನ್ನೂ ಸಂಗ್ರಹಿಸಿಟ್ಟುಕೊಂಡಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವೆ ನಡೆದ 4ನೇ ಮೈಸೂರು ಯುದ್ಧ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಒಪ್ಪಂದ ಪತ್ರ ಸೇರಿದಂತೆ ಅನೇಕ ದಾಖಲೆಗಳಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಕಾಲದ ಅಭಿವೃದ್ಧಿ ಮಾದರಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇವುಗಳೆಲ್ಲ ಜ್ಞಾನ, ಮಾಹಿತಿ ಆಕರವಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಪುರಾತನ ಕಡತವನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
1973ರಲ್ಲಿ ಪತ್ರಾಗಾರ ಇಲಾಖೆ ಸ್ಥಾಪನೆ ಆಯಿತು. ಇದಕ್ಕೆ ಇದೀಗ 50 ವರ್ಷದ ಸಂಭ್ರಮ. ಮೈಸೂರು ರಾಜ್ಯಕ್ಕೆ ‘ಕರ್ನಾಟಕ ರಾಜ್ಯ’ ಎಂದು ನಾಮಕರಣಗೊಂಡು 50 ವರ್ಷ ಆಗಿದೆ. 1973ರಲ್ಲಿ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಜಯಚಾಮರಾಜ ಒಡೆಯರ್ ಅವರು ‘ಕರ್ನಾಟಕ’ ನಾಮಕಾರಣ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ್ದರು. ಈ ದಾಖಲೆ ಸಹ ಇದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು. ಹಾಲಿವುಡ್, ಬಾಲಿವುಡ್ ಸಿನಿಮಾಗಳು ಇತರ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುತ್ತದೆ. ಆದರೆ, ಕನ್ನಡ ಭಾಷೆಗೆ ಮಾಡುತ್ತಿಲ್ಲ. ಕ್ರೀಡೆಗಳ ನಿರೂಪಣೆಯೂ ಸಹ ಬೇರೆ ಭಾಷೆಯಲ್ಲಿರುತ್ತದೆ.
ಕನ್ನಡ ಭಾಷೆಯಲ್ಲಿ ಇರಲ್ಲ. ಕನ್ನಡಿಗರು ಬೇರೆ ಭಾಷೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಇದಕ್ಕೆ ಕಾರಣ. ಇದರಿಂದ ನಮ್ಮ ಭಾಷೆಗೆ ಧಕ್ಕೆಯಾಗಲಿದೆ. ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಬಳಕೆ ಮಾಡಿದರೆ ಎಲ್ಲೆಡೆ ಇದಕ್ಕೆ ಮನ್ನಣೆ ದೊರೆಯಲಿದೆ ಎಂದರು.
ಕನ್ನಡ ಭಾಷೆ, ನಾಡಿನ ಅಸ್ಮಿತೆ ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೆಲಸಗಳೂ ಆಗಬೇಕು. ಅದಕ್ಕಾಗಿ ಬೇರೆ ಭಾಷೆಗಳನ್ನು ವಿರೋಧಿಸುವ ಅಗತ್ಯವಿಲ್ಲ. ಬದಲಿಗೆ ಕನ್ನಡದ ಮೇಲೆ ಪ್ರೀತಿ, ಅಭಿಮಾನ ಮೂಡಿಸಿಕೊಳ್ಳಬೇಕು ಎಂದರು.
ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಹಿರಿಯರು, ಹಲವಾರು ದಿಗ್ಗಜರು ಈಗಾಗಲೇ ಕನ್ನಡ ದೀಪವನ್ನು ಹಚ್ಚುವ ಕೆಲಸ ಮಾಡಿದ್ದಾರೆ. ಅದನ್ನು ದ್ವಿಗುಣಗೊಳಿಸಿ ಉಳಿಸುವುದು ನಮ್ಮ ಕರ್ತವ್ಯ. ಕನ್ನಡ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಎಲ್ಲ ರೀತಿಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕರ್ನಾಟಕದ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದರು.
ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿದುಕೊಳ್ಳಬೇಕು. ನಮ್ಮ ನೆಲದ ಹಿನ್ನೆಲೆಯ ಬಗ್ಗೆ ನಮಗೆ ಅರಿವಿರಬೇಕು. ಪತ್ರಾಗಾರ ಇಲಾಖೆಯು ದಾಖಲೆಗಳನ್ನು ಸಂಸ್ಕರಿಸಿ ಸಂರಕ್ಷಿಸುವ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯಲು ಸಹಾಯಕಾರಿಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಪತ್ರಾಗಾರ ಇಲಾಖೆಗೆ ಭೇಟಿ ನೀಡಿ ಅಲ್ಲಿರುವ ದಾಖಲೆ ಹಾಗೂ ಮಾಹಿತಿ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿ ಮರಿತಿಬ್ಬೇಗೌಡ ಮಾತನಾಡಿದರು. ಎಂಎಲ್‌ಸಿ ಸಿ.ಎನ್.ಮಂಜೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ಪ್ರಾಂಶುಪಾಲ ಡಾ.ಎಸ್ ಮರಿಗೌಡ ಇತರರು ಇದ್ದರು.