ಬಿ. ಸದಾಶಿವ ಪ್ರಭು 
ಜಿಲ್ಲೆ

ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಿಇಒ ಸದಾಶಿವ ಪ್ರಭು

ಹೊಸಪೇಟೆ: ಜಿಲ್ಲೆಯ ಎಲ್ಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಪಂಚತಂತ್ರದಲ್ಲಿ ಇ-ಹಾಜರಾತಿ ದಾಖಲಿಸಬೇಕು ಎಂದು ಜಿ.ಪಂ.ಸಿಇಒ ಬಿ.ಸದಾಶಿವ ಪ್ರಭು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಈ ಹಾಜರಾತಿ ಮೇಲ್ವಿಚಾರಣೆ ದಾಖಲೆಗಳ ಮಾನಿಟರಿಂಗ್ ಮಾಡಲು ಜಿಲ್ಲಾ ಪಂಚಾಯಿತಿಯಲ್ಲಿ ಅವಕಾಶವಿದೆ.

ಒಂದು ವೇಳೆ ಪ್ರತಿದಿನ ಕಡ್ಡಾಯವಾಗಿ ದಾಖಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ರಾ.ಪಂ ಸಿಬ್ಬಂದಿ, ಸ್ವಸಹಾಯ ಸಂಘ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು,

ಆರೋಗ್ಯ ಇಲಾಖೆ ಸಂಪೂರ್ಣ ಸಮನ್ವಯ ಸಾಧಿಸಿಕೊಂಡು ಜಿಲ್ಲೆಯ ಎಲ್ಲ ಗ್ರಾಮಗಳನ್ನು ಬಯಲು ಮುಕ್ತ ಶೌಚಾಲಯ ಗ್ರಾಮಗಳನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ಸಾರ್ವಜನಿಕರು ಕಡ್ಡಾಯವಾಗಿ ಶೌಚಾಗೃಹ ಬಳಸುವಂತೆ ಜಾಗೃತಿ ಮೂಡಿಸಬೇಕಿದೆ. ಗ್ರಾ.ಪಂ. ಸಿಬ್ಬಂದಿ ಶೌಚಾಗೃಹ ಬಳಸದಿರುವ ಮಾಹಿತಿ ಸಿಕ್ಕರೆ ಅಂತಹವರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಬಾಪೂಜಿ ಸೇವಾ ಕೇಂದ್ರದ ಮೂಲಕ ದಾಖಲಿಸಿ ನಿಗದಿತ ಸಮಯದೊಳಗೆ ವಿಲೇವಾರಿ ಮಾಡಿ. ಗ್ರಾ.ಪಂ. ಗ್ರಂಥಾಲಯಗಳನ್ನು ಡಿಜಿಟಲೀಕರಣ ಸೇರಿ ತೆರಿಗೆಯನ್ನು ಕಡ್ಡಾಯವಾಗಿ ಪಿ.ಒ.ಎಸ್. ಮಷೀನ್ ಮೂಲಕವೇ ಸಂಗ್ರಹಿಸಬೇಕು.

ಒಂದು ವೇಳೆ ತೆರಿಗೆ ಸಂಗ್ರಹಣೆಯನ್ನು ಹಳೇ ವಿಧಾನ ಅನುಸರಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿ.ಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ, ಯೋಜನಾ ನಿರ್ದೇಶಕ ಅಶೋಕ ತೋಟದ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ ಹಾಜರಿದ್ದರು.