ಜಿಲ್ಲೆ

ಕಾಂಗ್ರೆಸ್​ನಿಂದ ಡಿಜಿಟಲ್ ಪ್ರತಿಜ್ಞೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಈಗಿನಿಂದಲೇ ‘ಶಸ್ತ್ರ’ ಸನ್ನದ್ಧವಾಗುತ್ತಿದೆ.

ಜು.2ರಂದು ನಡೆಯುವ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ತಯಾರಿಯನ್ನೇ ಮುಂದುವರಿಸಿಕೊಂಡು ಹೋಗುವ ಆಶಯ ಹೊಂದಿದ್ದು, ಈ ಮೂಲಕ ಕೇಡರ್ ಆಧಾರಿತ ಪಕ್ಷ ಕಟ್ಟುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಹಾಗೇ ಈ ಪ್ರಕ್ರಿಯೆ ಮುಂದುವರಿಸಿ ಗ್ರಾಮ ಪಂಚಾಯಿತಿ, ಬಿಬಿಎಂಪಿ ಹಾಗೂ ಇತರ ಸ್ಥಳೀಯ ಸಂಸ್ಥೆ ಚುನಾವಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಡಿ.ಕೆ. ಶಿವಕುಮಾರ್ ಹಾಗೂ ಮೂವರು ಕಾರ್ಯಾಧ್ಯಕ್ಷರು ಪಕ್ಷದ ಜವಾಬ್ದಾರಿ ಸ್ವೀಕರಿಸುವ ಕಾರ್ಯಕ್ರಮಕ್ಕೆ ‘ಪ್ರತಿಜ್ಞೆ’ ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯಡಿ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ, ನಗರ ಪ್ರದೇಶದ ವಾರ್ಡ್ ಸೇರಿ ಒಟ್ಟು 7,800 ಕಡೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಇಷ್ಟೂ ಕಡೆಗಳ ಕಾರ್ಯಕ್ರಮ ಲ್ಯಾಪ್​ಟಾಪ್ ಬಳಸಿ ಲೈವ್ ಮಾಡಲು, ಕಾರ್ಯಕ್ರಮದ ವರದಿ ಪಕ್ಷಕ್ಕೆ ಕಳಿಸಿಕೊಡಲು, ಪೂರ್ವ ತಯಾರಿಗೆ, ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ಉದ್ದೇಶದಿಂದ ನಾಲ್ವರನ್ನು ಗುರುತಿಸಿದ್ದು, ಆ ಪೈಕಿ ಒಬ್ಬರನ್ನು ಡಿಜಿಟಲ್ ಯೂತ್ ಎಂದೇ ಕರೆಯಲಾಗಿದೆ. ಉಳಿದವರು ಸಮನ್ವಯಕಾರರಾಗಿ ಇರಲಿದ್ದಾರೆ.

ಅಂತರ್ಜಾಲ, ಸಾಮಾಜಿಕ ಜಾಲತಾಣ, ಲೈವ್ ಸೇರಿ ಡಿಜಿಟಲ್ ಅರಿವಿರುವವರದ್ದೇ ತಂಡ ಕಟ್ಟಲಾಗಿದೆ. ಲೈವ್ ನಡೆಯುವಲ್ಲಿಂದ ಜಾಲತಾಣದಲ್ಲಿ ಅಲ್ಲಿನ ಸ್ಥಳೀಯ ವರದಿ ಪೋಸ್ಟ್ ಮಾಡಲಾಗುತ್ತದೆ. ಪ್ರತಿಜ್ಞೆ ಕಾರ್ಯಕ್ರಮ ಏಕಕಾಲಕ್ಕೆ 80 ಲಕ್ಷದಿಂದ 1 ಕೋಟಿ ಜನರನ್ನು ತಲುಪುವ ಗುರಿ ಹಾಕಿಕೊಳ್ಳಲಾಗಿದೆ. ಈ ಡಿಜಿಟಲ್ ತಂಡ ಕಲ್ಪನೆ ಎಲ್ಲ 58 ಸಾವಿರ ಪಂಚಾಯಿತಿ ಕ್ಷೇತ್ರಕ್ಕೂ, ಪ್ರತಿ ವಾರ್ಡ್​ಗೂ ವಿಸ್ತರಿಸಲಾಗುತ್ತದೆ. ಈ ಮೂಲಕ ಒಂದು ಲಕ್ಷಕ್ಕಿಂತ ಅಧಿಕ ಜನರ ದೊಡ್ಡ ತಂಡವನ್ನು ಕ್ರಿಯಾಶೀಲ ಆಗಿಡುವ ಕಲ್ಪನೆಯನ್ನು ಕೆಪಿಸಿಸಿ ಸಾಮಾಜಿಕ ಜಾಲತಾಣ ತಂಡ ಹೊಂದಿದೆ. ಪಕ್ಷ-ಕೆಪಿಸಿಸಿ ಅಧ್ಯಕ್ಷರ ಸಂದೇಶ, ಬಿಜೆಪಿಗೆ ಉತ್ತರಿಸುವ ಮಾಹಿತಿ, ಪ್ರತಿಭಟನಾರ್ಥ ಸಂದೇಶಗಳನ್ನು ಈ ಡಿಜಿಟಲ್ ವ್ಯವಸ್ಥೆ ಮೂಲಕ ಏಕಕಾಲಕ್ಕೆ ಕಳಿಸಲು ಉದ್ದೇಶಿಸಲಾಗಿದೆ. ಗ್ರಾ.ಪಂ. ಚುನಾವಣೆ, ಸ್ಥಳೀಯ ಸಂಸ್ಥೆಯಲ್ಲಿ ಇದೇ ತಂಡ ಪರಿಣಾಮಕಾರಿ ಆಗಿ ಬಳಕೆ ಆಗಲಿದೆ.

ತರಬೇತಿ: ಪ್ರತಿ ಬೂತ್​ನಲ್ಲೂ ಕ್ರಿಯಾಶೀಲ ತಂಡ ಇದ್ದರೆ ತಕ್ಷಣ ಮನೆಮನೆಗೆ ಸಂದೇಶ ಮುಟ್ಟಿಸ ಬಹುದು ಎಂಬ ದೂರದೃಷ್ಟಿಯಿಂದ ತಯಾರಿ ನಡೆಯುತ್ತಿದೆ. ಜಾಲತಾಣ ತಂಡದ ಜಿಲ್ಲಾಮಟ್ಟದ ಕೋ ಆರ್ಡಿನೇಟರ್ಸ್, ಪಂಚಾಯಿತಿ ಡಿಜಿಟಲ್ ಯೂತ್​ಗೆ ವಿಡಿಯೋ ಸಂವಾದದ ಮೂಲಕ ತರಬೇತಿ ನೀಡಲಾಗಿದೆ. ಲೈವ್, ಸಂದೇಶ ರವಾನೆ, ಟ್ರೆಂಡ್ ಸೃಷ್ಟಿ ಬಗ್ಗೆ ತಿಳಿಸಿಕೊಡಲಾಗುತ್ತಿದೆ.

ಟ್ರೆಂಡ್ ಆಲೋಚನೆ

ಕಳೆದ ವಾರ ದೇಶಾದ್ಯಂತ ನಡೆದ ಸ್ಪೀಕಪ್ ಇಂಡಿಯಾ ಕಾರ್ಯಕ್ರಮದಲ್ಲಿ ಕರ್ನಾಟಕ ಎರಡನೇ ಸ್ಥಾನ ತಲುಪಿತ್ತು. ಏಕಕಾಲದಲ್ಲಿ ಕಾರ್ಯಕರ್ತರು ಜಾಲತಾಣದಲ್ಲಿ ಚಟುವಟಿಕೆ ನಡೆಸಿದ್ದರಿಂದ 30 ಲಕ್ಷ ಜನರಿಗೆ ಕಾರ್ಯಕ್ರಮ ತಲುಪಿತ್ತು. ಪ್ರತಿಜ್ಞೆ ಕಾರ್ಯಕ್ರಮವನ್ನು 80 ಲಕ್ಷದಿಂದ 1 ಕೋಟಿ ಜನರಿಗೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಮುಂದೆಯೂ ಸರ್ಕಾರದ ವಿರುದ್ಧ ಅಭಿಪ್ರಾಯ ಸಂಗ್ರಹಗಳನ್ನು ರೂಪಿಸುವಾಗ ಇದೇ ತಂಡವನ್ನು ಬಳಸಿಕೊಂಡು, ಇದೇ ಮಾದರಿಯಲ್ಲಿ ಟ್ರೆಂಡ್ ಸೃಷ್ಟಿಸುವ ಆಲೋಚನೆಯೂ ಪಕ್ಷದ್ದಾಗಿದೆ.