ಹೊಸಕೋಟೆ ತಾಲೂಕು ಸೂಲಿಬೆಲೆ ಗ್ರಂಥಾಲಯದಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು. 
ಜಿಲ್ಲೆ

ಗ್ರಾಮೀಣ ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ

ಶಿವರಾಜ.ಎಂ

83,602 ಓದುಗರ ನೋಂದಣಿ*

83 ಪಂಚಾಯಿತಿ ವ್ಯಾಪ್ತಿಯಲ್ಲಿ ಜ್ಞಾನಭಂಡಾರಕ್ಕೆ ಹೊಳಪು

  • ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
    ಹಳೇ ಪುಸ್ತಕಗಳ ರಾಶಿ, ಕೆಲವೊಂದು ದಿನಪತ್ರಿಕೆಗಳಿಗಷ್ಟೇ ಸೀಮಿತವಾಗಿದ್ದ ಗ್ರಂಥಾಲಯಗಳಿಗೆ ಇದೀಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಗ್ರಾಮಾಂತರ ಜಿಲ್ಲೆಯಲ್ಲಿನ 101 ಪಂಚಾಯಿತಿಗಳ ಪೈಕಿ 83 ಪಂಚಾಯಿತಿಯಗಳಲ್ಲಿನ ಗ್ರಂಥಾಲಯಗಳು ಮೇಲ್ದರ್ಜೆಗೇರಿದ್ದು 83,602 ಓದುಗರ ನೋಂದಣಿ ಮೂಲಕ ದಾಖಲೆ ಸೃಷ್ಟಿಸಿದೆ. ಈ ಮೂಲಕ ಜ್ಞಾನದೇಗುಲವನ್ನು ಮೇಲ್ದರ್ಜೆಗೇರಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ.
    ಪ್ರಾಥಮಿಕ ಶಾಲಾ ಮಕ್ಕಳಿಂದ ಪದವಿವರೆಗಿನ ವಿದ್ಯಾರ್ಥಿಗಳ ಪಾಲಿಗೆ ಜ್ಞಾನದೇಗುಲವಾಗಿರುವ ಗ್ರಂಥಾಲಯಗಳಲ್ಲಿ ಹೊಸ ಹೊಸ ಯೋಜನೆಗಳು ಸಾಕಾರಗೊಳ್ಳುತ್ತಿದ್ದು, ಯುವ ಸಮುದಾಯಕ್ಕೆ ಹೊಸ ಅವಿಷ್ಕಾರಗಳ ಪರಿಚಯ ಮಾಡಿಕೊಡುತ್ತಿವೆ. ಪುಸ್ತಕಗಳ ಸಾಲುಗಳ ಜತೆಗೆ ಲ್ಯಾಪ್‌ಲಾಟ್, ಕಂಪ್ಯೂಟರ್, ಟಿವಿ, ಸ್ಮಾರ್ಟ್ ಪೋನ್‌ಗಳು ಬಂದಿದ್ದು, ಪ್ರಪಂಚದ ಅಷ್ಟೂ ಮಾಹಿತಿಯನ್ನು ಒಂದೇ ಸೂರಿನಡಿ ಅರಿತುಕೊಳ್ಳುವ ಸದಾವಕಾಶ ಈಗ ಗ್ರಾಮೀಣ ಪ್ರದೇಶಗಳಲ್ಲಿ ದೊರಕುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಜಿಪಂ ಸಹಯೋಗದಲ್ಲಿ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಹಯೋಗದಲ್ಲಿ ಆಧುನಿಕ ಉಪಕರಣಗಳು ಬಂದಿದ್ದು, ಗ್ರಾಮೀಣ ಭಾಗದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದೆ.
    ಅಭಿಯಾನಗಳ ಗೊಂಚಲು:
    ಮಕ್ಕಳಲ್ಲಿ ಗ್ರಂಥಾಲಯಗಳ ಅಭಿರುಚಿ ಬೆಳೆಸಲು ಓದಿನ ಮನೆಗೆ ಹೋಗೋಣ, ಚದುರಂಗ ಆಟ ಆಡೋಣ, ಓದು ಅಭಿಯಾನ, ಅಮ್ಮನಿಗಾಗಿ ಒಂದು ಪುಸ್ತಕ, ಚಿಣ್ಣರ ಚಿತ್ತಾರ, ನಿಮ್ಮ ಗೆಳೆಯರನ್ನು ಗ್ರಂಥಾಲಯಕ್ಕೆ ಕರೆತನ್ನಿ, ಮಕ್ಕಳಿಗೆ ಬೇಸಿಗೆ ಶಿಬಿರ, ಸಣ್ಣ ಕಥೆ ಬರೆಯುವುದು, ನನ್ನ ಓದುವ ಪುಸ್ತಕಗಳು ನನ್ನ ಪ್ರೀತಿಯ ಗ್ರಂಥಾಲಯ ಹೀಗೆ ಸಾಕಷ್ಟು ಅಭಿಯಾನದ ಗೊಂಚಲುಗಳ ಮೂಲಕ ಗ್ರಂಥಾಯಲಗಳ ಮಹತ್ವ ಸಾರುವ ಪ್ರಯತ್ನ ನಡೆಯುತ್ತಿದೆ.
    ಉನ್ನತ ಶಿಕ್ಷಣ, ಸ್ಪರ್ಧಾತ್ಮ ಪರೀಕ್ಷೆ:
    ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಾಗಿರುವ ಗ್ರಂಥಾಲಯಗಳ ಮೂಲಕ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಗ್ರಾಮೀಣ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಿಗೆ ಅರಿವು ಕೇಂದ್ರಗಳ ಜ್ಞಾನಸಂಪನ್ಮೂಲಗಳನ್ನು ಬಳಸಿಕೊಂಡು ಯಶಸ್ಸಿನತ್ತ ಹೆಜ್ಜೆ ಇಡಲಾಗುತ್ತಿದೆ.
    ಸೂಲಿಬೆಲೆ ಗ್ರಂಥಾಲಯ ಬೆಸ್ಟ್:
    83 ಗ್ರಂಥಾಲಯಗಳ ಪೈಕಿ ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿನ ಗ್ರಂಥಾಲಯ ಜಿಲ್ಲೆಯಲ್ಲಿಯೇ ಬೆಸ್ಟ್ ಗ್ರಂಥಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. 8 ಲ್ಯಾಬ್‌ಟಾಪ್, 1 ಎಲ್‌ಇಡಿ ಟಿವಿ, 4 ಸ್ಮಾರ್ಟ್‌ಪೋನ್ ಸೇರಿ 6 ಕಂಪ್ಯೂಟರ್‌ಗಳನ್ನೊಳಗೊಂಡ ಗ್ರಂಥಾಲಯ ಗಮನ ಸೆಳೆಯುತ್ತಿದೆ. 16ರಿಂದ 40 ವರ್ಷ ವಯೋಮಾನದ ಯುವಜನತೆಗೆ ಡಿಜಿಟಲ್ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಅರಿವು ಕೇಂದ್ರ ಕ್ರಾಂತಿಯನ್ನೇ ಮಾಡಿದೆ. ಯುವಜನತೆಗೆ ೈಥಾನ್, ಕೋಡಿಂಗ್, ಜಾವಾ ಮತ್ತಿತರ ಕೌಶಲಗಳನ್ನು ಕಲಿಸಲು ಓರ್ವ ಶಿಕ್ಷಕನನ್ನು ನಿಯೋಜಿಸಲಾಗಿದೆ. ಸುಮಾರು ಒಂದೂವರೆ ಸಾವಿರ ಮಂದಿ ಈ ಕೇಂದ್ರದಲ್ಲಿ ನೋಂದಣಿಯಾಗಿದ್ದಾರೆ ಎನ್ನಲಾಗಿದೆ. 2 ಸಾವಿರ ಜನರಿಗೆ ಇದರ ಪ್ರಯೋಜನ ದೊರಕಿಸಿಕೊಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಜಿಟಲ್ ಸಾಕ್ಷರತಾ ಕಾರ್ಯಕ್ರಮ: ಗ್ರಾಮೀಣ ಭಾಗದ ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿಯೇ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ರೂಪಿಸಿದ್ದು, ಸೂಲಿಬೆಲೆ ಅರಿವು ಕೇಂದ್ರದಲ್ಲಿ ನೂರಾರು ಮಹಿಳೆಯರು ಸ್ಮಾರ್ಟ್ ಪೋನ್ ಬಳಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ಓಟಿಪಿ ಬಳಕೆ, ಮೊಬೈಲ್ ಸೆಟ್ಟಿಂಗ್, ಹಿಸ್ಟರಿ ರೀಡ್ ಹಾಗೂ ಡಿಲೀಟ್ ಸೇರಿ ಇನ್ನಿತರ ಪ್ರಮುಖ ಉಪಯುಕ್ತ ಮಾಹಿತಿಗಳ ಬಗ್ಗೆ ತರಬೇತಿ ನೀಡಲಾಗಿದೆ. ಕಂಪ್ಯೂಟರ್ ಬೇಸಿಕ್ ಜಾವ ಮತ್ತು ಡಿಜಿಟಲ್ ಸ್ಕಿಲ್ಸ್ಗಳನ್ನು ಕಲಿಸಿಕೊಡಲಾಗುತ್ತಿದೆ. ಇದರೊಂದಿಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ರೂಪಿಸಲಾಗಿದ್ದು, ಇಲಾಖೆಯ ಅಧಿಕಾರಿಗಳೇ ತಂಡ ರಚಿಸಿಕೊಂಡು ಗ್ರಾಮ ಡಿಜಿ ವಿಕಸನ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಶ್ರಮಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಕ್ಕೆ ಹೆಚ್ಚು ಭೇಟಿ ನೀಡುವುದರ ಜತೆಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಸಂಪನ್ಮೂಲಗಳನ್ನು ಬಳಸುತ್ತಿರುವುದು ಖುಷಿ ತಂದಿದೆ. ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಗ್ರಂಥಾಲಯಗಳ ಡಿಜಿಟಲ್ ಕ್ರಾಂತಿಯಲ್ಲಿ ಗ್ರಾಮಾಂತರ ಜಿಲ್ಲೆ ಇನ್ನಿತರ ಜಿಲ್ಲೆಗಳಿಗಿಂತ ಮೊದಲ ಸ್ಥಾನಕ್ಕೇರಲಿದೆ ಎಂಬ ವಿಶ್ವಾಸವಿದೆ.

ಗಂಗಾಧರ್, ಶಿಕ್ಷಣ ಪೌಂಡೇಷನ್ ಜಿಲ್ಲಾ ಸಂಯೋಜಕ