ಜಿಲ್ಲೆ

ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆ: ನೋಂದಾಯಿತ ಆಸ್ಪತ್ರೆಗಳಿಗೆ ಪ್ರೋತ್ಸಾಹಧನ

ಪಂಕಜ ಕೆ.ಎಂ.

ಬೆಂಗಳೂರು: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಅಡಿಯಲ್ಲಿ ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆಗೆ (ಡಿಎಚ್‌ಐಎಸ್) ನೋಂದಾಯಿಸಿಕೊಂಡಿರುವ ಸಾರ್ವಜನಿಕ ಆಸ್ಪತ್ರೆಗಳಿಗೆ ಪ್ರೋತ್ಸಾಹಧನ ಬಳಸಿಕೊಳ್ಳಲು ಮಾರ್ಗಸೂಚಿ ಪ್ರಕಟಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಮಾರ್ಗಸೂಚಿ ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲ ಸಾರ್ವಜನಿಕ ಆರೋಗ್ಯ ಸಂಸ್ಥೆ ಅಥವಾ ಆಸ್ಪತ್ರೆಗಳಿಗೆ ಅನ್ವಯವಾಗುತ್ತದೆ. ಇದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ)ದಿಂದ ಪಡೆದ ನಿಧಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ರೋಗಿಯು ಆಸ್ಪತ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತನ್ನ ಆರೋಗ್ಯದ ಪ್ರೊಫೈಲ್ ಅನ್ನು ಆಸ್ಪತ್ರೆಗೆ ಒದಗಿಸಲು ಆಯುಷ್ಮಾನ್ ಭಾರತ್ ಅಡಿ ಸ್ಕ್ಯಾನ್ ಆ್ಯಂಡ್ ಶೇರ್ ಆಯ್ಕೆಯ ಬಳಕೆಯನ್ನು ಉತ್ತೇಜಿಸಲು ಡಿಜಿಟಲ್ ದಾಖಲೆಗಳ ಸೃಷ್ಟಿಗೆ ಪ್ರೋತ್ಸಾಹಧನ ಒದಗಿಸಲಾಗಿದೆ. ಈ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಅನುವಾಗುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಫಾರ್ಮಸಿ, ಪ್ರಯೋಗಾಲಯಗಳಲ್ಲಿ ಸ್ಕ್ಯಾನ್ ಆ್ಯಂಡ್ ಶೇರ್ ಅನುಷ್ಠಾನ, ಸ್ಕ್ಯಾನ್ ಮಾಡಿ ಪಾವತಿ ಆಯ್ಕೆ ಒದಗಿಸುವುದು. ವೈದ್ಯರ ಕೌಂಟರ್‌ಗಳಲ್ಲಿ ಸ್ಕ್ಯಾನ್ ಆ್ಯಂಡ್ ಶೇರ್, ಆಸ್ಪತ್ರೆಯ ಡಿಜಿಟಲ್ ಕಾರ್ಯಕ್ರಮ ಅನುಷ್ಠಾನ ಇತ್ಯಾದಿ ಕಾರ್ಯಗಳಿಗೆ ಪ್ರೋತ್ಸಾಹ ಧನ ನೀಡಲು ಸೂಚಿಸಲಾಗಿದೆ. ಹೀಗೆ ನೀಡುವ ಪ್ರೋತ್ಸಾಹ ಧನವು ಪ್ರತಿ ಆಸ್ಪತ್ರೆಯ ಇ-ಆಸ್ಪತ್ರೆ ಉಸ್ತುವಾರಿ ಅಧಿಕಾರಿ, ಇ-ಆಸ್ಪತ್ರೆ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ತಿಂಗಳಿಗೆ ಗರಿಷ್ಠ 3 ಸಾವಿರ ರೂ. ಮಿತಿ ಮೀರಬಾರದು. ಎಲ್ಲ ರೋಗಿಗಳ ಮಾಹಿತಿಯನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ತಮ್ಮ ವೈಯಕ್ತಿಕ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಬಳಕೆ ಮಾಡುವ ವೈದ್ಯರಿಗೆ ತಿಂಗಳಿಗೆ ಸಾಧನ ಬಳಕೆಗೆ 700 ರೂ. ಹಾಗೂ ಇಂಟರ್ನೆಟ್ ಡೇಟಾ ಶುಲ್ಕವಾಗಿ 300 ರೂ. ಪಾವತಿಸಬೇಕು.

ಮಾನವ ಸಂಪನ್ಮೂಲಗಳನ್ನು ನಿಗದಿತ ಮತ್ತು ನಿರ್ದಿಷ್ಟ ಅವಧಿಗೆ ಹೊರಗುತ್ತಿಗೆ ಸಂಸ್ಥೆ ಅಥವಾ ನೇರ ನೇಮಕಾತಿ ಮೂಲಕ ಪರಿಗಣಿಸಬೇಕು. ಇವರಿಗೆ ಡಿಜಿಟಲ್ ದಾಖಲೆ ನಿರ್ವಹಣೆ ಮಾಡುವವರಿಗೆ ಪ್ರತಿ ವ್ಯವಹಾರಕ್ಕೆ 5-10 ರೂ. ಪ್ರೋತ್ಸಾಹಧನ ಒದಗಿಸಬಹುದು. ಕಾರ್ಯನಿರತ ಸಿಬ್ಬಂದಿಗೆ ನೀಡುವ ಪ್ರೋತ್ಸಾಹಧನವು ಅವರ ಮಾಸಿಕ ವೇತನಕ್ಕಿಂತ ಹೆಚ್ಚಿರಬಾರದು ಎಂಬುದು ಸೇರಿ ವಿವಿಧ ನಿಯಮಗಳನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.