ಜಿಲ್ಲೆ

ಸೈಬರ್ ವಂಚಕರಿಂದ ಡಿಜಿಟಲ್ ಅರೆಸ್ಟ್ : ದಂಪತಿಯಿಂದ ದೋಚಿದ್ದ 2.40 ಕೋಟಿ ರೂ. ಮೊತ್ತದಲ್ಲಿ 50 ಲಕ್ಷ ರೂ. ವಶಪಡಿಸಿದ ಪೊಲೀಸರು

ಸೌಮ್ಯ ಆರ್

ಕಾಸರಗೋಡು: ಕಾಞಂಗಾಡಿನ ದಂಪತಿಯಿಂದ ಡಿಜಿಟಲ್ ಅರೆಸ್ಟ್ ಮೂಲಕ 2.40 ಕೋಟಿ ರೂ.ಗಳನ್ನು ಸೈಬರ್ ವಂಚಕರು ಎಗರಿಸಿದ್ದು, ತಕ್ಷಣ ನಡೆಸಿರುವ ಕಾರ್ಯಾಚರಣೆಯಿಂದ ಈ ಮೊತ್ತದಲ್ಲಿ 50 ಲಕ್ಷ ರೂ. ಮೊತ್ತವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ವಂಚಕರು ಠೇವಣಿಯಿರಿಸಿಕೊಂಡಿದ್ದ ಬಿಹಾರದ ಸಂಪತ್‌ರಾಜ್ ಶಾಖೆಯಿಂದ ಈ ಮೊತ್ತ ವಶಪಡಿಸಿಕೊಳ್ಳಲಾಗಿದೆ. ಕಾಞಂಗಾಡಿನ ನಿವೃತ್ತ ಶಿಕ್ಷಕ ಹಾಗೂ ವೈದ್ಯೆ ದಂಪತಿಯ ಹಣವನ್ನು ಆ.12 ಮತ್ತು 21ರ ಕಾಲಾವಧಿಯಲ್ಲಿ ಈ ಮೊತ್ತ ಎಗರಿಸಲಾಗಿದೆ. ಕೊನೆಯ ಬಾರಿಗೆ ಖಾತೆಯಿಂದ ಮೊತ್ತ ದೋಚಿರುವುದು ದಂಪತಿ ಗಮನಕ್ಕೆ ಬರುತ್ತಿದ್ದಂತೆ ಸೈಬರ್ ಕ್ರೈಂ ಪೋರ್ಟಲ್ 1930ಗೆ ಕರೆ ಮಾಡಿ ದೂರು ದಾಖಲಿಸಿ, ಕಾಸರಗೋಡು ಸೈಬರ್ ಪೊಲೀಸರಿಂದ ಸಹಾಯ ಕೋರಿದ್ದಾರೆ. ವಂಚನೆ ನಡೆಸಿದ ಕೆಲವೇ ಗಂಟೆಗಳಲ್ಲಿ ದೂರು ದಾಖಲಾಗಿದ್ದರಿಂದ(ಗೋಲ್ಡನ್ ಅವರ್) ಹಣವನ್ನು ಮರಳಿ ವಶಪಡಿಸಿಕೊಳ್ಳಲು ಸಾಧ್ಯವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯ ಭರತ್ ರೆಡ್ಡಿ ಐಪಿಎಸ್ ಸೂಚನೆ ಮೇರೆಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಪಿನ್ ಯು.ಪಿ. ಅವರ ಮೇಲ್ವಿಚಾರಣೆಯಲ್ಲಿ ಎಸ್‌ಐ ರವೀಂದ್ರನ್, ಶಿನು ಕೆ.ಬಿ., ಎಎಸ್‌ಐ ಪ್ರಶಾಂತ್, ರಂಜಿತ್, ಎಸ್‌ಸಿಪಿಒ ಸುದೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.