ಆಂಧ್ರಪ್ರದೇಶದ ಆದೋನಿಯಲ್ಲಿ ಶಾಲೆಗೊಂದು ಕನ್ನಡ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ತೆಲುಗು ದೇಶಂ ಕಾರ್ಯನಿರ್ವಾಹಕ ಕಾರ್ಯದರ್ಶಿ ಗುಡಿಸೆ ಆದಿ ಕೃಷ್ಣಮ್ಮ ಉದ್ಘಾಟಿಸಿದರು. ಗಡಿನಾಡ ಸಾಹಿತಿ ನಾ.ಮ.ಮರುಳಾರಾಧ್ಯ, ಸಿರಗುಪ್ಪ ತಾಲೂಕು ಕಸಾಪ ಅಧ್ಯಕ್ಷ ಡಾ.ಮಧುಸೂದನ ಕಾರಿಗನೂರು ಇತರರಿದ್ದರು. 
ಜಿಲ್ಲೆ

ಗಡಿಭಾಗದ ಕನ್ನಡ ಶಾಲೆಗಳಿಗೆ ಸಂಕಷ್ಟ - ಸಾಹಿತಿ ನಾ.ಮ. ಮರುಳಾರಾಧ್ಯ ಹೇಳಿಕೆ

ಶ್ರೀನಾಥ

ಸಿರಗುಪ್ಪ: ಆಂಧ್ರಪ್ರದೇಶದಲ್ಲಿನ ಕರ್ನಾಟಕ ಗಡಿಭಾಗದ ಕನ್ನಡ ಶಾಲೆಗಳ ಸಂಕಷ್ಟ ಕೇಳುವವರು ಇಲ್ಲದಂತಾಗಿದೆ ಎಂದು ಗಡಿನಾಡ ಸಾಹಿತಿ ನಾ.ಮ.ಮರುಳಾರಾಧ್ಯ ಹೇಳಿದರು.

ಆದೋನಿಯ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಶ್ರೀಗೂಳ್ಯಂ ಹಿರೇಮಠ ಕುಮಾರಸ್ವಾಮಿ ಕನ್ನಡ ಸೇವಾ ಸಮಿತಿ ಹಾಗೂ ಶ್ರೀ ಕುಮಾರಸ್ವಾಮಿ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಾಲೆಗೊಂದು ಕನ್ನಡ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ಆದೋನಿ ತಾಲೂಕಿನಲ್ಲಿ 70 ಕನ್ನಡ ಶಾಲೆಗಳಿದ್ದು, 1200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇವರ ಸಮರ್ಪಕ ವಿದ್ಯಾಭ್ಯಾಸ ಮತ್ತು ಭವಿಷ್ಯದ ಉದ್ಯೋಗಕ್ಕೆ ಆಂಧ್ರ, ಕರ್ನಾಟಕ ಸರ್ಕಾರದಿಂದ ಸೂಕ್ತ ಸ್ಪಂದನೆ ಇಲ್ಲದಂತಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಹಲವು ಬಾರಿ ಎರಡೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿರಗುಪ್ಪ ತಾಲೂಕು ಕಸಾಪ ಅಧ್ಯಕ್ಷ ಡಾ.ಮಧುಸೂದನ ಕಾರಿಗನೂರು ಮಾತನಾಡಿ, ಬಳ್ಳಾರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಂಧ್ರ ಕನ್ನಡಿಗರ ಪರ ಧ್ವನಿ ಎತ್ತುವುದಾಗಿ ತಿಳಿಸಿದರು. ತೆಲುಗು ದೇಶಂ ಕಾರ್ಯನಿರ್ವಾಹಕ ಕಾರ್ಯದರ್ಶಿ ಗುಡಿಸೆ ಆದಿ ಕೃಷ್ಣಮ್ಮ ಮಾತನಾಡಿ, ಗಡಿ ಭಾಗದ ಕನ್ನಡಿಗರ ಸಮಸ್ಯೆ ಪರಿಹರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು. ಬಳಿಕ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ‘ಗತ್ತಿನ ಅತ್ತೆ ಗಮ್ಮತ್ತಿನ ಸೊಸೆ’ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಉದ್ಯಮಿ ಕೆ.ಸೂಗೂರಪ್ಪ, ಕನ್ನಡ ಸಂಘಗಳ ಅಧ್ಯಕ್ಷ ವೀರಭದ್ರಗೌಡ, ಕಲಾವಿದ ಬಿ.ಭೀಮಣ್ಣ, ಪ್ರಮುಖರಾದ ಶಿವಶಂಕರಗೌಡ, ವೈ.ಮುತ್ತಣ್ಣ, ಅಶ್ವತ್ಥಪ್ಪ, ಬಿ.ಗಿಡ್ಡಯ್ಯ, ಭುವನೇಶ್ವರಿ, ತ್ರೀವೇಣಿ, ಎಚ್.ಆದಿನಾರಾಯಣ, ಕೆ.ಮುರಳಿ, ಲಕ್ಷ್ಮೀದೇವಮ್ಮ, ಶ್ರೀನಿವಾಸಮೂರ್ತಿ, ಕೆ.ಖಾದರ್ ಬಾಷಾ, ಐ.ಕೃಷ್ಣಮೂರ್ತಿ, ಡಿ.ಎಚ್.ವೆಂಕಟೇಶ್, ಗುರುಬಸವರಾಜ, ಶಿವಕುಮಾರ ತಾತ, ಶಿಕ್ಷಕರು ಇತರರಿದ್ದರು.