ಮೂಡಿಗೆರೆ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದ ಜನ ಈಗ ಮತ್ತೊಮ್ಮೆ ನೆಲಕಚ್ಚುವಂತೆ ಮಾಡಿದ್ದಾರೆ ಎಂದು ಶಾಸಕಿ ನಯನ ಮೋಟಮ್ಮ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದು ಕೊಂಡಿತ್ತು. ಬಿಜೆಪಿ ಅಭ್ಯರ್ಥಿಗಳು ಅಧಿಕ ಅಂತರದ ಮತಗಳಿಂದ ಜಯಗಳಿಸಿದ್ದರು. ಈ ಬಾರಿ ಬಿಜೆಪಿ ಗೆಲುವು ಪಡೆದ ಕ್ಷೇತ್ರದಲ್ಲಿ ಮತಗಳ ಅಂತರ ಕಡಿಮೆಯಾಗಿದೆ. ಕೆಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಜೆಡಿಎಸ್ ಜತೆ ಸೇರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಯಾಸದ ಗೆಲುವು ಪಡೆದಿದೆ. ಇದು ಬಿಜೆಪಿ ಮುಖಂಡರಿಗೆ ಮುಜುಗರ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಜನ ಕಾಂಗ್ರೆಸ್ ಪರ ನಿಂತಿದ್ದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯುವಂತಾಗಿದೆ. ಗ್ಯಾರಂಟಿ ಯೋಜನೆ ಜನರಿಗೆ ವರದಾನವಾಗಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿಗರು ಹತಾಶೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿರುವುದರಿಂದ ರಾಜ್ಯಸರ್ಕಾರದ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡತನ ರೇಖೆಗಿಂತ ಕೆಳಗಿನ ಕುಟುಂಬವನ್ನು ಆರ್ಥಿಕ ಸಹಾಯದ ಮೂಲಕ ಮೇಲೆತ್ತಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗಿದೆ. ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರದ ಆಹಾರ ಭದ್ರತಾ ಯೋಜನೆ ದೇಶದ ಬಡವರ ಹಸಿವು ನೀಗಿಸಿದೆ ಎಂದು ಹೇಳಿದ್ದಾರೆ.
ಈ ಬಾರಿ ಇಂಡಿಯಾ ಕೂಟಕ್ಕೆ ಕೇಂದ್ರದಲ್ಲಿ ಅಧಿಕಾರ ಸಿಗುವ ಸಾಧ್ಯತೆ ಇದೆ.10 ವರ್ಷದ ನಂತರ ಇಂಡಿಯಾ ಕೂಟ ಅಧಿಕಾರಕ್ಕೆ ಬರಲಿದೆ. ಬಿಜೆಪಿಯ 2 ಅವಧಿಯ ದುರಾಡಳಿತಕ್ಕೆ ಅಂತಿಮ ತೆರೆ ಬೀಳಬೇಕು ಎಂದು ಜನ ಬಯಸಿದ್ದಾರೆ. ಅದರಂತೆ ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.