* ವಾರ್ಷಿಕ 1.08 ಲಕ್ಷ ಸಸಿ ಬೆಳೆಸಲು ನಿಗದಿ
* ನರ್ಸರಿಗಳೀಗ ಖಾಲಿಖಾಲಿ
* ನರೇಗಾದ ಬಿಗಿ ನಿಯಮ ಕಾರಣ?
ಗಂಗಾಧರ್ ಬೈರಾಪಟ್ಟಣ ರಾಮನಗರ
ಅರಣ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸಾಮಾಜಿಕ ಅರಣ್ಯ ಇಲಾಖೆಗೆ ಈಗ ಕಷ್ಟ ಕಾಲ ಬಂದೊದಗಿದ್ದು, ಇನ್ಮುಂದೆ ಅಷ್ಟು ಸುಲ‘ಕ್ಕೆ ಜನರಿಗೆ ಸಸಿಗಳು ಸಿಗುವುದಿಲ್ಲ. ಸರ್ಕಾರದ ಆದೇಶ ಪಾಲನೆ ಹಾಗೂ ನರೇಗಾದ ಬಿಗಿ ನಿಯಮಗಳಿಂದ ನರ್ಸರಿಗಳ ಬೆಳವಣಿಗೆಗೆ ಹಿನ್ನಡೆಯಾಗಿದ್ದು, ವಾರ್ಷಿಕ 20 ಲಕ್ಷ ಸಸಿ ಬೆಳೆಯುತ್ತಿದ್ದ ನರ್ಸರಿಗಳು ಈಗ ಖಾಲಿಖಾಲಿಯಾಗಿವೆ.
ರಾಮನಗರ ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಯ ನಾಲ್ಕು ವಲಯಗಳಲ್ಲಿ ವಾರ್ಷಿಕವಾಗಿ ಸುಮಾರು ಲಕ್ಷ ಲಕ್ಷ ವಿವಿಧ ಜಾತಿಯ ಸಸಿ ಬೆಳೆಸಿ, ವಿವಿಧ ಯೋಜನೆಗಳಲ್ಲಿ ರೈತರಿಗೆ ನೀಡಲಾಗುತ್ತಿತ್ತು, ರಸ್ತೆ ಬದಿಯಲ್ಲಿ ನೆಡಲಾಗುತ್ತಿತ್ತು. ಆದರೆ ಈ ವರ್ಷ ಸಸಿ ಬೆಳೆಸುವಿಕೆಯನ್ನು ಕೇವಲ 1.08 ಲಕ್ಷ ಸಸಿಗಳಿಗೆ ನಿಗದಿ ಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್‌ಕೆವಿವೈ) ರೈತರಿಗೆ ಸಬ್ಸಿಡಿ ದರದಲ್ಲಿ ಸಸಿ ವಿತರಣೆ ಮಾಡುವುದು ಬಿಟ್ಟರೆ ಉಳಿದ ಯೋಜನೆಗಳು ಬಹುತೇಕ ಅಂತ್ಯಗೊಂಡಿವೆ.
ರಾಜ್ಯ ಸರ್ಕಾರ ಕೃಷಿ ಜಮೀನುಗಳಲ್ಲಿ ಬೆಲೆ ಬಾಳುವ ಮರಗಳನ್ನು ಬೆಳೆಸಿ, ರೈತರಿಗೆ ಆರ್ಥಿಕ ಬಲ ತುಂಬುವ ಸಲುವಾಗಿ ಅರಣ್ಯ ಕೃಷಿ ಯೋಜನೆ ಜಾರಿಗೆ ತಂದಿತ್ತು. ಈ ಮೂಲಕ ತೇಗ, ಹೊನ್ನೆ, ಬೀಟೆ, ಗಂಧದಂತಹ ಬೆಲೆ ಬಾಳುವ ಗಿಡಗಳು ರೈತರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದವು. ಜತೆಗೆ ಇಂತಿಷ್ಟು ವರ್ಷಗಳ ಗಿಡಗಳ ನಿರ್ವಹಣೆಗೂ ನರೇಗಾ ಅಡಿಯಲ್ಲಿ ಸಹಾಯಧನ ನೀಡಲಾಗುತಿತ್ತು. ಆದರೆ ಈ ಯೋಜನೆಯಡಿ ಬಹುತೇಕ ಗಿಡ ನೆಡಲಾಗಿದೆ. ಕೆಲ ಜಮೀನುಗಳು ಸ್ಥಳೀಯವಾಗಿ ಇದ್ದರೂ ಮಾಲೀಕರು ಬೆಂಗಳೂರು ಸೇರಿ ಹೊರ ಊರುಗಳಲ್ಲಿ ಇರುವ ಕಾರಣ ಇವುಗಳ ನಿರ್ವಹಣೆ ಇಲ್ಲದಿರುವುದನ್ನು ಕಂಡ ಸರ್ಕಾರ ಇಡೀ ಯೋಜನೆಯನ್ನೇ ರದ್ದು ಮಾಡಿದೆ. ಇದೂ ಸಹ ನರ್ಸರಿಗಳಲ್ಲಿ ಸಸಿ ಬೆಳೆಸುವಿಕೆ ಪ್ರಮಾಣ ಕಡಿಮೆ ಮಾಡಲು ಕಾರಣ ಎನ್ನಲಾಗುತ್ತಿದೆ.
ಹಿಪ್ಪು ನೇರಳೇ ಗಿಡ ಬೆಳೆಯುವಂತಿಲ್ಲ
ರಾಮನಗರ ಜಿಲ್ಲೆ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ಹಲವಾರು ವರ್ಷಗಳಿಂದಲೂ ರೈತರಿಗೆ ಬೇಕಾದ ರೇಷ್ಮೆ ಗಿಡ ಬೆಳೆಸುವ ಜವಾಬ್ದಾರಿ ಸಾಮಾಜಿಕ ಅರಣ್ಯ ಇಲಾಖೆ ಮೇಲಿತ್ತು. ಪ್ರತಿ ವರ್ಷ ಕನಿಷ್ಠ 8-10 ಲಕ್ಷ ಸಸಿ ಬೆಳೆಸಿ ರೇಷ್ಮೆ ಬೆಳೆಗಾರರಿಗೆ ನೀಡಲಾಗುತಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ರೇಷ್ಮೆ ಗಿಡ ಬೆಳೆಸುವ ಜವಾಬ್ದಾರಿಯನ್ನು ಇಲಾಖೆಯಿಂದ ಹಿಂದಕ್ಕೆ ಪಡೆದುಕೊಂಡ ಕಾರಣ ಈಗ ನರ್ಸರಿಗಳು ಖಾಲಿಯಾಗಿವೆ.
ರಸ್ತೆ ಬದಿಯೂ ನೆಡುವಂತಿಲ್ಲ
ಕಳೆದ ಹಲವಾರು ವರ್ಷಗಳಿಂದಲೂ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಸಿ ನೆಟ್ಟು ಬೆಳೆಸಲಾಗುತ್ತಿತ್ತು. ಆದರೆ, ಈಗ ಈ ಕೆಲಸಕ್ಕೂ ಬ್ರೇಕ್ ಬಿದ್ದಿದೆ. ನೆಟ್ಟು ಬೆಳವಣಿಗೆ ಕಾಣದ ಸಸಿಗಳನ್ನು ಮಾತ್ರ ನೆಡಲು ಅವಕಾಶ ನೀಡಲಾಗಿದ್ದು, ಈ ಕಾರಣದಿಂದಲೂ ನರ್ಸರಿಗಳಲ್ಲಿ ಗಿಡಗಳನ್ನು ಬೆಳೆಸುವ ಸಂಖ್ಯೆ ಕಡಿಮೆ ಆಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯೇ ಸಾಕಷ್ಟು ಗಿಡ ಬೆಳೆಸಲಾಗುತ್ತಿತ್ತು. ರೈತರೂ ಸಹ ಇದೇ ಯೋಜನೆ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ನರೇಗಾ ಮಾನವ ದಿನಗಳ ಸೃಜನೆಗೆ ಬಂದಿರುವ ಬಿಗಿ ನಿಯಮಗಳು ರೈತರ ಉತ್ಸಾಹವನ್ನು ಕಡಿಮೆ ಮಾಡಿದೆ.
--ವಿವಿಧ ಯೋಜನೆಯಡಿ ಸಸಿಗಳನ್ನು ಬೆಳಸಿ ವಿತರಿಸಲಾಗುತ್ತಿತ್ತು. ಈ ವರ್ಷ ಕಡಿಮೆ ಗುರಿಯನ್ನು ನೀಡಲಾಗಿದೆ. ಕೆಲ ಯೋಜನೆಗಳು ಸ್ಥಗಿತಗೊಂಡಿವೆ. ಆರ್‌ಕೆವಿವೈ ಯೋಜನೆಯಡಿ ರೈತರಿಗೆ ಸಬ್ಸಿಡಿ ದರಲ್ಲಿ ಗಿಡಗಳನ್ನು ನೀಡಲಾಗುತ್ತದೆ. ಪ್ರಸನ್ನಕುಮಾರ್,ಡಿಸಿಎಫ್, ಸಾಮಾಜಿಕ ಅರಣ್ಯ, ರಾಮನಗರ