ಜಿಲ್ಲೆ

ಕಬ್ಬಿನ ತೂಕದಲ್ಲಿ ವ್ಯತ್ಯಾಸ ಆರೋಪ: ಮೈಷುಗರ್ ಆಡಳಿತ ಮಂಡಳಿ ವಿರುದ್ಧ ರೈತರ ಆಕ್ರೋಶ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಕಾರ್ಖಾನೆಗೆ ಎತ್ತಿನಗಾಡಿಯಲ್ಲಿ ಸಾಗಿಸುತ್ತಿರುವ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿ ಎತ್ತಿನಗಾಡಿಗೆ 150 ರಿಂದ 200 ಕೆ.ಜಿ ಮೋಸ ಮಾಡಲಾಗುತ್ತಿದೆ ಎಂದು ರೈತರು ಮೈಷುಗರ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ಕಬ್ಬು ಗುಣಮಟ್ಟವಾಗಿಲ್ಲ, ತೊಂಡೆಯಿಂದ ಕೂಡಿದೆ ಎಂದು ಕಾರಣ ನೀಡಿ ಅಧಿಕಾರಿಗಳು ತೂಕದಲ್ಲಿ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ದೂರಿದರು.

ಕಾರ್ಖಾನೆಯ ಫೀಲ್ಡ್‌ಮನ್‌ಗಳು ಪರ್ಮಿಟ್ ನೀಡುವಾಗ ಎಷ್ಟು ತಿಂಗಳ ಕಬ್ಬು ಎಂದು ಅವರಿಗೆ ಗೊತ್ತಾಗುವುದಿಲ್ಲವೇ?. ಅವರೇ ಪರ್ಮಿಟ್ ನೀಡಿ ಕಾರ್ಖಾನೆ ವತಿಯಿಂದಲೇ ನೇಮಿಸಿರುವ ಕೂಲಿಯಾಳುಗಳೇ ಕಬ್ಬು ಕಟಾವು ಮಾಡಿದ್ದಾರೆ. ಇದರಲ್ಲಿ ನಮ್ಮ ತಪ್ಪೇನಿಲ್ಲ ಎಂದು ಬೇಸರ ಹೊರಹಾಕಿದರು. ಮಾಹಿತಿ ತಿಳಿದು ನಗರಸಭಾ ಸದಸ್ಯ ನಾಗೇಶ್ ಸ್ಥಳಕ್ಕೆ ಧಾವಿಸಿ ರೈತರು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ನಿಮ್ಮ ಕಾರ್ಖಾನೆ ಅಧಿಕಾರಿಗಳೇ ಪರ್ಮಿಟ್ ನೀಡಿ ಕಬ್ಬು ಕಟಾವು ಮಾಡಿಸಿದ್ದಾರೆ. ಇದರಲ್ಲಿ ರೈತರ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕಾರ್ಖಾನೆಯ ನಿಯಮವೇ ಹಾಗಿದೆ. ತೊಂಡೆ ಕಬ್ಬನ್ನು ಸಾಗಿಸಿದರೆ ಇಳುವರಿ ಕಡಿಮೆಯಾಗಲಿದೆ. ಆದ್ದರಿಂದ ಈ ಕಾನೂನನ್ನು ಜಾರಿಗೆ ತಂದಿದ್ದೇವೆ ಎಂದಿದ್ದಾರೆ.